ದೇಶದ ಪ್ರಥಮ EV ಸಫಾರಿ ಬಸ್‌ಗೆ ಪ್ರಾಯೋಗಿಕ ಚಾಲನೆ

ಬೆಂಗಳೂರು: ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್‌ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಜೈವಿಕ ಉದ್ಯಾನವನಕ್ಕೆ ಕೆಲವೇ ತಿಂಗಳುಗಳಲ್ಲಿ ಚಿಂಪಾಜಿ, ಬೇಟೆ ಚಿತಾ, ಜಾಗ್ವರ್ ಸೇರಿದಂತೆ ಹತ್ತು ವಿದೇಶಿ ವನ್ಯಜೀವಿಗಳು ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.
ಉದ್ಯಾನವನದಲ್ಲಿ ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್ ಪ್ರಾಯೋಗಿಕವಾಗಿ ಸಂಚರಿಸಲಿದೆ. ಡೀಸೆಲ್ ವಾಹನಗಳಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ವಿದ್ಯುತ್ ಚಾಲಿತ ವಾಹನ ಪರಿಚಯಿಸಲಾಗಿದೆ ಎಂದು ತಿಳಿಸಿದರು. ಬನ್ನೇರುಘಟ್ಟದಲ್ಲಿ ಸೀಮಿತ ಆವರಣ ಪ್ರದೇಶದೊಳಗೆ ರೂಪಿಸಿರುವ ವನ್ಯಜೀವಿ ಸಫಾರಿಯಲ್ಲಿ ಹುಲಿ, ಚಿರತೆ, ಸಿಂಹ, ಕರಡಿಗಳ ದರ್ಶನ ಪ್ರವಾಸಿಗರಿಗೆ ನಿಶ್ಚಿತವಾಗಿ ಆಗುತ್ತದೆ. ಈ ಸಫಾರಿಗಳಿಗೆ ಪ್ರಸ್ತುತ ಡೀಸೆಲ್ ವಾಹನಗಳನ್ನು ಬಳಸಲಾಗುತ್ತಿದ್ದು, ಈ ವಾಹನಗಳಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೇಶದಲ್ಲೇ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ವಾಹನ ಪರಿಚಯಿಸಲಾಗುತ್ತಿದೆ, ಇಂದು ಚಾಲನೆ ನೀಡಿರುವ ವಿದ್ಯುತ್ ಚಾಲಿತ ಬಸ್, 22 ಆಸನಗಳನ್ನು ಹೊಂದಿದ್ದು, 100 ಕೆ.ವಿ. ಬ್ಯಾಟರಿ ಸಾಮರ್ಥ್ಯದ್ದಾಗಿದೆ. 2 ಗಂಟೆ ಚಾರ್ಜ್ ಮಾಡಿದರೆ 160 ಕಿ.ಮೀ. ಅಂದರೆ 8 ಟ್ರಿಪ್ ಸಂಚರಿಸಲಿದೆ. ಹಾಲಿ ಒಂದು ಬಸ್ ಮಾತ್ರವೇ ಕಾರ್ಯಾರಂಭ ಮಾಡಲಿದ್ದು, 2027 ರೊಳಗೆ ಬನ್ನೇರುಘಟ್ಟ ಉದ್ಯಾನವನ್ನು (ಟ್ಯ್ರಾಕ್ಟರ್ ಇತ್ಯಾದಿ ಉಪಯೋಗಿ ವಾಹನ ಹೊರತು ಪಡಿಸಿ) ಪಳೆಯುಳಿಕೆ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸಲಾಗುವುದು ಎಂದರು.