ಭತ್ತದ ಕೂಳೆಗೆ ಬೆಂಕಿ ಹಾಕುವ ಅಗತ್ಯವೇನೂ ಇಲ್ಲ. ಬೇರೆ ರೀತಿ ಬಳಕೆ ಸಾಧ್ಯ. ರೈತರಿಗೆ ಸೂಕ್ತ ನಿರ್ದೇಶನ ಅಗತ್ಯ. ಬ್ಯಾಟರಿ ಚಾಲಿತ ವಾಹನ ಬಳಕೆಗೆ ಉತ್ತೇಜನ ಮತ್ತು ಪಟಾಕಿ ನಿಷೇಧಕ್ಕೆ ಕಟ್ಟುನಿಟ್ಟಿನ ಆದೇಶ ಬೇಕು.
ದೆಹಲಿಯಲ್ಲಿ ದಿನೇದಿನೆ ವಾತಾವರಣ ಕಲುಷಿತಗೊಂಡು ಜನಸಾಮಾನ್ಯರು ಉಸಿರಾಡುವುದೇ ಕಷ್ಟವಾಗಿದೆ. ಸುಪ್ರೀಂ ಕೋರ್ಟ್ ಇದಕ್ಕೆ ಸಂಬಂಧಿಸಿದಂತೆ ೫ ರಾಜ್ಯಗಳಿಗೆ ನೋಟಿಸ್ ನೀಡಿದೆ. ರೈತರು ಭತ್ತದ ಕೂಳೆಗೆ ಬೆಂಕಿ ಹಾಕುವುದನ್ನು ನಿಷೇಧಿಸಲು ರಾಜ್ಯ ಸರ್ಕಾರಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಭತ್ತದ ಕೂಳೆಯನ್ನು ಬೇರೆ ರೂಪದಲ್ಲಿ ಬಳಸಿಕೊಳ್ಳಲು ಅವಕಾಶವಿದೆ. ಕೂಳೆ ಸುಟ್ಟಾಗ ಏಳುವ ಹೊಗೆ ದೆಹಲಿಯನ್ನು ಆವರಿಸುತ್ತಿದೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳೆಲ್ಲ ಮುಗಿದು ಹೋಗಿವೆ. ಈಗ ವಾಸ್ತವ ಸಂಗತಿಯನ್ನು ಎದುರಿಸುವುದು ಅನಿವಾರ್ಯವಾಗಿದೆ. ದೆಹಲಿಯಲ್ಲಿ ವಾತಾವರಣ ಹದಗೆಡಲು ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ರಾಜಾಸ್ಥಾನದಲ್ಲಿ ಭತ್ತದ ಕೂಳೆಗೆ ರೈತರು ಬೆಂಕಿ ಹಾಕುವುದು ಕಾರಣ. ಇದರಿಂದ ಬರುವ ಹೊಗೆ ದೆಹಲಿಯನ್ನು ಆವರಿಸಿ ದಟ್ಟವಾದ ಕಪ್ಪು ಪದರವನ್ನು ನಿರ್ಮಿಸುತ್ತಿದೆ. ಹಿಂದೆ ಕೆಲವು ದಿನಗಳು ಇರುತ್ತಿದ್ದ ಈ ಸಮಸ್ಯೆ ಈಗ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ತೀವ್ರಗೊಳ್ಳುತ್ತಿದೆ. ದೆಹಲಿಯಲ್ಲಿ ಶಾಲೆಗಳಲ್ಲಿ ರಜೆ ನೀಡಲಾಗಿದೆ. ಮಕ್ಕಳು ಮತ್ತು ವಯೋವೃದ್ಧರು ಮನೆಯಿಂದ ಹೊರಗೆ ಬರುವಂತಿಲ್ಲ.
ಪಂಜಾಬ್, ಉತ್ತರಪ್ರದೇಶ, ಹರಿಯಾಣದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುತ್ತಾರೆ. ಭತ್ತದ ಬೆಳೆ ಬಂದ ಕೂಡಲೇ ಗೋಧಿ ಹಾಕುತ್ತಾರೆ. ಆದ್ದರಿಂದ ಭತ್ತದ ಕೂಳೆಯನ್ನು ಕೂಡಲೇ ತೆಗೆಯಬೇಕು. ಅದನ್ನು ತೆಗೆಯಲು ಕೂಲಿಕಾರರನ್ನು ಕರೆಸುವುದಕ್ಕೆ ರೈತರು ಬಯಸುವುದಿಲ್ಲ. ಒಂದು ಪೈಸೆ ವೆಚ್ಚವಿಲ್ಲದೆ ಮಾಡಬಹುದಾದ ಕೆಲಸ ಎಂದರೆ ಕೂಳೆಗೆ ಬೆಂಕಿ ಹಾಕುವುದು. ಅದು ಸುಟ್ಟ ಮೇಲೆ ಬೂದಿಯನ್ನು ನೆಲದೊಳಕ್ಕೆ ಸೇರಿಸಿ ಉಳುಮೆ ಮಾಡುವುದು. ಹೊಗೆ ಎಲ್ಲ ಕಡೆ ಆವರಿಸಿ ಬೆಂಕಿಯಿಂದ ಮಣ್ಣಿನಲ್ಲಿರುವ ಪೋಷಕಾಂಶ ಬೆಂದು ಹೋಗುತ್ತದೆ.ಅದರ ಬದಲು ಭತ್ತದ ಕೂಳೆಯನ್ನು ಭೂಮಿಯೊಳಗೆ ಹಾಕಿ ಉಳುಮೆ ಮಾಡಿದರೆ ಅದು ಉತ್ತಮ ಸಾವಯವ ಗೊಬ್ಬರವಾಗುತ್ತದೆ. ರೈತರು ಈ ಕೆಲಸ ಮಾಡಲು ತಯಾರಿಲ್ಲ. ಅವರು ಕೂಳೆಯನ್ನು ಸುಟ್ಟು ಹೊಸ ಬೆಳೆಗೆ ರಸಗೊಬ್ಬರ ಹಾಕಿ ಹೆಚ್ಚುವರಿ ಇಳುವರಿ ಪಡೆಯಲು ಬಯಸುತ್ತಾರೆಯೇ ಹೊರತು ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಲೆಕ್ಕಿಸಲು ಹೋಗುವುದಿಲ್ಲ. ನಮ್ಮ ದೇಶದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವುದು ಪಶ್ಚಿಮ ಬಂಗಾಳ. ಅಲ್ಲಿ ಕೂಳೆ ಸುಡುವ ಪದ್ಧತಿ ಇಲ್ಲ. ರೈತರು ಅದನ್ನು ದನಕರುಗಳ ಮೇವಿಗೆ ಬಳಸುತ್ತಾರೆ. ಗುಡಿಸಲಿಗೆ ಸೂರು ನಿರ್ಮಿಸಲು ಭತ್ತದ ಹುಲ್ಲು ಬಳಸುತ್ತಾರೆ. ಪೇಪರ್ ತಯಾರಿಕೆ ಕಂಪನಿಗೂ ಹೋಗುತ್ತದೆ. ಸಾವಯವ ಗೊಬ್ಬರ ತಯಾರಿಕೆಯಲ್ಲೂ ಇದು ಬಳಕೆಯಾಗುತ್ತದೆ. ಪ್ರತಿ ವರ್ಷ ೪೦ ದಶಲಕ್ಷ ಟನ್ ಭತ್ತದ ಕೂಳೆ ಸದ್ಫಬಳಕೆಯಾಗುತ್ತಿದೆ.
ಕೂಳೆಯನ್ನು ಹೊರತುಪಡಿಸಿದರೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವುದು ಮೋಟಾರು ವಾಹನಗಳ ಬಳಕೆ. ದೆಹಲಿಯಲ್ಲಿ ೭೫ ಲಕ್ಷ ವಾಹನಗಳಿವೆ. ಇವುಗಳ ನಂಬರ್ ಪ್ಲೇಟ್‌ನಲ್ಲಿರುವುದನ್ನು ಸರಿ-ಬೆಸ ವಿಂಗಡಿಸಿ ದಿನ ಬಿಟ್ಟು ದಿನ ಬಳಸಲು ಸೂಚನೆ ನೀಡಲಾಗಿದೆ. ಡೀಸೆಲ್ ಬಸ್‌ಗಳನ್ನು ನಿಷೇಧಿಸಲು ಹಲವು ರಾಜ್ಯಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಆಧರಿತ ವಾಹನಗಳನ್ನು ತೆಗೆದು ಬ್ಯಾಟರಿ ಆಧರಿತ ಯಂತ್ರಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಇದಕ್ಕೆ ಸರಿಸಮಾನವಾಗಿ ನಿಷೇಧದ ಹೊಸ್ತಿಲಲ್ಲಿರುವುದು ಪಟಾಕಿ ಬಳಕೆ. ಬೇರಿಯಂ ಮಿಶ್ರಿತ ಪಟಾಕಿಯನ್ನು ಬಳಸದಂತೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಆದರೂ ಹಲವು ರಾಜ್ಯಗಳು ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಹಸಿರು ಪಟಾಕಿ ಬಳಸಲು ಸೂಚನೆ ನೀಡಿದ್ದರೂ ಬಹುತೇಕ ರಾಜ್ಯಗಳು ಸ್ಪಷ್ಟ ನಿರ್ದೇಶನ ನೀಡುತ್ತಿಲ್ಲ. ದೆಹಲಿಯಲ್ಲೇನೋ ಪಟಾಕಿ ಬಳಕೆಗೆ ನಿಷೇಧ ಹೇರಲಾಗಿದೆ. ಉಳಿದ ರಾಜ್ಯಗಳಲ್ಲಿ ಪಟಾಕಿಯಿಂದ ಬೆಂಕಿ ಅಪಘಾತ ಸಂಭವಿಸುತ್ತಿದ್ದರೂ ನಿಷೇಧಕ್ಕೆ ಮೀನಮೇಷ ಎಣಿಸಲಾಗುತ್ತಿದೆ. ದೆಹಲಿಗೆ ಇಂದು ಬಂದಿರುವ ತುರ್ತು ಸಂದರ್ಭ ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ನಗರಗಳಿಗೂ ಬರಲಿದೆ. ಅದಕ್ಕೆ ಈಗಲೇ ಕ್ರಮ ಕೈಗೊಳ್ಳುವುದು ಅಗತ್ಯ. ಪರಿಸರ ಮಾಲಿನ್ಯಕ್ಕೆ ಗೋಡೆ ಹಾಕಲು ಬರುವುದಿಲ್ಲ.