ದಾವಣಗೆರೆ ತಾಲೂಕಿನ ವಿವಿಧೆಡೆ ಬಿರುಸಾದ ಮಳೆ

ಮಳೆ

ದಾವಣಗೆರೆ: ತಾಲೂಕಿನ ಕೆಲವೆಡೆ ಗುಡುಗು, ಸಿಡಿಲು ಸಹಿತ ಬಿರುಸಾದ ಮಳೆ ಬುಧವಾರ ರಾತ್ರಿ ಸುರಿದಿದ್ದು, ಕಾದು ಕಬ್ಬಿಣದ ಭೂಮಿ ತೆಂಪರೆಯಿತು.
ತಾಲೂಕಿನ ಗಂಗನಕಟ್ಟೆ, ಚಿನ್ನಸಮುದ್ರ, ನರಗನಹಳ್ಳಿ, ಹೊನ್ನನಾಯಕನಹಳ್ಳಿ ಹಾಗೂ ಭಾವಿಹಾಳ್ ಗ್ರಾಮಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು, ಮಿಂಚು, ಸಿಡಿಲು ಸಹಿತ ಬಿರುಸಾದ ಮಳೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿಯಿತು.
ಬೆಳಗ್ಗೆಯಿಂದಲೇ ರಣ ಬಿಸಿಲು ಸುರಿದಿದ್ದು, ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಭೂಮಿ ತೆಂಪರೆದು ತಂಪಾದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಬಿಸಿಲಿಗೆ ಬಸವಳಿದಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಬಿಸಿಲಿನ ತಾಪಕ್ಕೆ ಅಡಿಕೆ ತೋಟಗಳು ನಲುಗಿ ಹೋಗಿದ್ದು, ಸುರಿದ ಮಳೆಯಿಂದಾಗಿ ಭೂಮಿ ತೊಯ್ದು ಒಂದಿಷ್ಟು ಜೀವ ಬಂದಂತಾಗಿದೆ.