ಕೊಪ್ಪಳ: ತುಂಗಭದ್ರಾ ಜಲಾಶಯದ ವಿಚಾರದಲ್ಲಿ ವಿರೋಧ ಪಕ್ಷದ ಮಾಡಿದ ಟೀಕೆಗಳು ಸತ್ತವು, ಕೆಲಸ ಉಳಿಯಿತು ಎಂದು ಉಪಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ತಾಲ್ಲೂಕಿನ ಬಸಾಪುರ ಗ್ರಾಮದ ಖಾಸಗಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಿತ್ತಿಹೋಗಿದ್ದನ್ನು ರಾಷ್ಟ್ರ ಗಮನಿಸುತ್ತಿತ್ತು. ವಿಪಕ್ಷದವರು ಕೇವಲ ಟೀಕೆಗಳನ್ನು ಮಾಡಿ, ರಾಜಕೀಯ ಮಾತನಾಡಿದರು. ಆದರೆ ನಮ್ಮ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಒಂದು ನಿಮಿಷವು ಮಲಗಲಿಲ್ಲ. ಜಿಂದಾಲ್ ಕಂಪನಿ, ನಾರಾಯಣ ಎಂಜಿನಿಯರಿಂಗ್ ಸಂಸ್ಥೆ ಮತ್ತು ಹಿಂದೂಸ್ತಾನ ಸ್ಟೀಲ್ಸ್ ಕಂಪನಿಯವರಿಗೆ ಸಂಪರ್ಕ ಮಾಡಿ, ೩ ಕಂಪನಿಯವರ ವಿನ್ಯಾಸದ ಪ್ರಕಾರ ನಾಲ್ಕೈದು ದಿನಗಳಲ್ಲಿ ಗೇಟ್ ತಯಾರಿಸಿದರು. ತಜ್ಞರ ತಂಡದವರು ಗೇಟ್ ಕೂರಿಸಿದರು. ಜಲಾಶಯದಲ್ಲಿ ಪ್ರಸ್ತುತ ನೀರು ತುಂಬುತ್ತಿದೆ. ದೇವರ ಮತ್ತು ಜನ ಆಶೀರ್ವಾದದಿಂದ ರೈತರಿಗೆ ನೀರು ಉಳಿಸಿದ್ದೇವೆ. ಜಲಾಶಯ ಭರ್ತಿಯಾದ ಮೇಲೆ ಗೌರವ ಸಮರ್ಪಣೆ ಮಾಡುತ್ತೇವೆ ಎಂದರು.
ಜಲಾಶಯ ಭದ್ರತೆ ವಿಚಾರದಲ್ಲಿ ಡ್ಯಾಂ ಪರಿಶೀಲನೆಗೆ ಸಮಿತಿ ಮಾಡಿದ್ದೇವೆ. ಸಮಿತಿಯವರು ಭೇಟಿ ನೀಡಿ, ಭದ್ರತೆ ವಿಚಾರದಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದರು.
                
























