ಟ್ರ್ಯಾಕ್ಟರ್‌ ರ್‍ಯಾಲಿಗೆ ನಿರ್ಬಂಧ: ಹೆಬ್ಬಾಳ್ಕರ್‌ ಅಸಮಾಧಾನ

0
22

ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಟ್ರ್ಯಾಕ್ಟರ್ ರ್‍ಯಾಲಿಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಯಾವುದೇ ರ್‍ಯಾಲಿ, ಹೋರಾಟಗಳಿಗೆ ನಿರ್ಬಂಧ ಹೇರಬಾರದು, ಇದು ಪ್ರಜಾಪ್ರಭುತ್ವ. ಪಂಚಮಸಾಲಿ ಮೀಸಲಾತಿಗಾಗಿ ನಾನು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇನೆ ಎಂದರು.
ಈಗ ಕಬ್ಬಿನ ಸೀಸನ್‌ ಆಗಿರುವುದರಿಂದ ಟ್ರ್ಯಾಕ್ಟರ್‌ಗಳು ಹೆಚ್ಚು ಓಡಾಡುತ್ತಿರುತ್ತವೆ. ಅಧಿವೇಶನದ ವೇಳೆ ಯಾವುದೇ ಅಪಘಾತ, ದುರ್ಘಟನೆ ಆಗಬಾರದು ಅಂತಾ ಮುಂಜಾಗ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರಬಹುದು ಎಂದು ಸಚಿವರು ಹೇಳಿದರು.
ನಾನು ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರ ಜೊತೆ ಮಾತನಾಡಿದ್ದೇನೆ. ಇಂದು ಸಂಜೆ 4ಗಂಟೆಗೆ ನಾನು ಸ್ವಾಮೀಜಿಗಳು, ಸಿ.ಸಿ. ಪಾಟೀಲ್, ಅರವಿಂದ್ ಬೆಲ್ಲದ ಸೇರಿದಂತೆ ಎಲ್ಲರೂ ಸಭೆ ನಡೆಸುತ್ತಿದ್ದೇವೆ. ಈ ಸಭೆಯಲ್ಲಿ ಒಂದು ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಪಟ್ಟಂತೆ ನಾನು ಸ್ವಾಮೀಜಿ ಅವರ ಜೊತೆ ಹಾಗೂ ನಮ್ಮ ಸಮಾಜದ ಇತರ ಪಕ್ಷಗಳ ನಾಯಕರ ಜೊತೆಗೂ ನಿರಂತರ ಸಂಪರ್ಕದಲ್ಲಿದ್ದೇನೆ. ಇಂತಹ ಗುರುಗಳು ಸಿಕ್ಕಿದ್ದು ನಮ್ಮ ಪುಣ್ಯ. ನಾಳೆ ನಡೆಯಲಿರುವ ಸಮಾವೇಶದಲ್ಲಿ ನಾನು ಖಂಡಿತವಾಗಿ ಭಾಗಿಯಾಗುತ್ತೇನೆ ಎಂದು ಸಚಿವರು ತಿಳಿಸಿದರು.
ನಾನು ಸಚಿವೆ ಆಗಿರುವ ಕಾರಣ ವಿಧಾನಸಭೆ ಕಲಾಪದ ವೇಳೆ ಬಾವಿಗಿಳಿದು ಧರಣಿ ಮಾಡುವುದಕ್ಕೆ ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಯಾರಾದರೂ ವಿಷಯ ಪ್ರಸ್ತಾಪಿಸಿದಾಗ ಧ್ವನಿಯಾಗಿ ಇರುವೆ. ನಾನೂ ಹಾಗೂ ನನ್ನ ತಮ್ಮ ಚನ್ನರಾಜ ಹಟ್ಟಿಹೊಳಿ ಧ್ವನಿಯಾಗಿ ಇರ್ತೀವಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

Previous articleಬಾಣಂತಿಯರು, ಹಸಿಗೂಸುಗಳ ಸಾವಿನ ಪ್ರಕರಣ ಮುಚ್ಚಿಡುವ ಪ್ರಶ್ನೆಯೇ ಇಲ್ಲ
Next articleತಾರತಮ್ಯ ಇದ್ದರೆ ಅದು ಧರ್ಮ ಆಗಲು ಸಾಧ್ಯವಿಲ್ಲ…