ಬೆಂಗಳೂರು: ನಬಾರ್ಡ್ ವ್ಯವಸ್ಥೆ ಮುಖ್ಯಮಂತ್ರಿಯವರಿಗೆ ತಿಳಿದಿದ್ದರೂ ತಮ್ಮ ಸರ್ಕಾರದಲ್ಲಿನ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಅಕ್ರಮಗಳನ್ನು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ದೇಶದಲ್ಲಿ ನಬಾರ್ಡ್ ವ್ಯವಸ್ಥೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಆದದ್ದಲ್ಲ ಮೊದಲಿನಿಂದಲೂ ಜಾರಿ ಇದ್ದ ವ್ಯವಸ್ಥೆ. ಈ ವ್ಯವಸ್ಥೆಯ ಅನ್ವಯವಾಗಿ ದೇಶದ ಎಲ್ಲಾ ಬ್ಯಾಂಕುಗಳಿಗೆ ರಾಷ್ಟ್ರೀಕೃತ ಬ್ಯಾಂಕ್, ಶೆಡ್ಯುಲ್ ಬ್ಯಾಂಕ್ ಹಾಗೂ ಇತರ ಖಾಸಗಿ ಬ್ಯಾಂಕ್ ಗಳಿಗೆ ಒತ್ತು ಸಾಲ ನೀಡಿಕೆಯಲ್ಲಿ ಕೃಷಿ ಕ್ಷೇತ್ರಕ್ಕೆ ಶೇ.40 ರಷ್ಟು ನಿಗದಿಪಡಿಸಿರುತ್ತದೆ. ಬ್ಯಾಂಕ್ ಗಳು ಕಡಿಮೆ ಸಾಲ ನೀಡಿದ್ದಲ್ಲಿ ಉಳಿದ ಮೊತ್ತವನ್ನು ಆರ್.ಬಿ.ಐ ವಾಪಾಸ್ ಪಡೆದು ನಬಾರ್ಡ್‌ಗೆ ನೀಡುತ್ತದೆ. ಈ ಹಣವನ್ನೇ ನಬಾರ್ಡ್ ಆಯಾ ರಾಜ್ಯಗಳ ಸಹಕಾರಿ ಸಂಘ, ಬ್ಯಾಂಕ್ ಗಳ ಮೂಲಕ ರೈತರಿಗೆ ಕೃಷಿ ಸಾಲ ನೀಡುತ್ತದೆ.
ಇದು ಮುಖ್ಯಮಂತ್ರಿಯವರಿಗೆ ತಿಳಿದಿದ್ದರೂ ತಮ್ಮ ಸರ್ಕಾರದಲ್ಲಿನ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಅಕ್ರಮಗಳನ್ನು ಮುಚ್ಚಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ಕರ್ನಾಟಕ ಪ್ರಸಕ್ತ ಸಾಲಿನಲ್ಲಿ ರೂ. 3.78 ಲಕ್ಷ ಕೋಟಿಯ ಬೃಹತ್ ಬಜೆಟ್ ನೀಡಿದ್ದರೂ ರೈತರಿಗೆ ಕೃಷಿ ಸಮ್ಮಾನ ಯೋಜನೆಯಡಿ ನೀಡುತ್ತಿದ್ದ ರೂ. 4,000 ನೆರವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಕರ್ನಾಟಕದಲ್ಲಿ ಗ್ರೌಂಡ್ ಲೆವೆಲ್ ಕ್ರೆಡಿಟ್ 8.15% ಕ್ಕೆ ಏರಿದೆ ಎಂಬ ಮಾಹಿತಿಯು ಕೃಷಿ ಸಾಲದ ಲಭ್ಯತೆಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಕಾರಣವಾಗಿದೆ.
ರಾಜ್ಯ ಸರ್ಕಾರದ ಈ ವೈಫಲ್ಯಗಳಿಗೆ ಸೂಕ್ತ ಕಾರಣ ನೀಡಲು ಸಾಧ್ಯವಾಗದೆ ಸಿಎಂ ಜನರ ಗಮನ ಬೇರೆಡೆ ಸೆಳೆಯಲು ಪದೇ ಪದೇ ಈ ರೀತಿಯ ವ್ಯರ್ಥ ಆರೋಪ ಮಾಡುತ್ತಿದ್ದಾರೆ.