ಗೆಲುವಿನ ಮಂದಹಾಸ ಬೀರಿದ ಮಂಧಾನ
ವಡೋದರಾ: ಕೋಟಂಬಿ ಕ್ರೀಡಾಂಗಣದಲ್ಲಿ 3ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್‌ನ 4ನೇ ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಆರ್‌ಸಿಬಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು, ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್ ಗಳಲ್ಲಿ 141 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು, 142 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕಿ ಸ್ಮೃತಿ ಮಂಧಾನ ಮತ್ತು ಡೇನಿಯಲ್ ವ್ಯಾಟ್ ಹಾಡ್ಜ್ ಮೊದಲ ಓವರ್ ನಿಂದಲೇ ಅಬ್ಬರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 10.5 ಓವರ್ ಗಳಲ್ಲಿ 107 ರನ್ ಕಲೆ ಹಾಕಿದ ಆರ್ ಸಿಬಿಯ ಮೊದಲ ಜೋಡಿಯಿಂದ ಗೆಲುವು ಸುಲಭವಾಯಿತು. ಇನ್ನು ಕ್ಯಾಪ್ಟನ್ ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ 3 ಭರ್ಜರಿ ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು.
ಈ ಮೂಲಕ ಆರ್‌ಸಿಬಿ ತನ್ನ ಗೆಲುವಿನ ಓಟ ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ 202 ರನ್‌ಗಳನ್ನು ಚೇಸ್ ಮಾಡಿ ಗೆದ್ದಿದ್ದ ಸ್ಮೃತಿ ಮಂಧಾನ ಪಡೆ ಇಂದು ನಡೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಫೆಬ್ರವರಿ 21ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಆರ್ ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.























