ಗುರು ತಾಳಕ್ಕೆ ಕುಣಿದ ನಾಯಕ

0
22

ಸಿನಿಮಾ: ರಂಗನಾಯಕ
ನಿರ್ದೇಶನ: ಗುರುಪ್ರಸಾದ್
ನಿರ್ಮಾಣ: ಎ.ಆರ್.ವಿಖ್ಯಾತ್
ತಾರಾಗಣ: ಜಗ್ಗೇಶ್, ರಚಿತಾ ಮಹಾಲಕ್ಷ್ಮಿ, ಗುರುಪ್ರಸಾದ್ ಇತರರು

ರೇಟಿಂಗ್: 3

-ಗಣೇಶ್ ರಾಣೆಬೆನ್ನೂರು

‘ಜಗ್ಗೇಶ್ ಪ್ರಧಾನ ಭೂಮಿಕೆಯಲ್ಲಿರುವ ಸಿನಿಮಾ ರಂಗನಾಯಕ’ ಎಂದೇ ಸಿನಿಮಾ ಬಿಡುಗಡೆಯಾಗುವವರೆಗೂ ಹೇಳಿಕೊಂಡು ಬಂದಿದ್ದರು ನಿರ್ದೇಶಕ ಗುರುಪ್ರಸಾದ್. ಆದರೆ ಸಿನಿಮಾ ಶುರುವಿನಿಂದ ಮಧ್ಯಂತರದವರೆಗೂ ಜಗ್ಗೇಶ್ ಅವರಿಗಿಂತ ಗುರುಪ್ರಸಾದ್ ಮೊದಲಾರ್ಧ ಪರದೆಯನ್ನು ಆಕ್ರಮಿಸಿಕೊಂಡಿದ್ದಾರೆ. ತನ್ನ ವೈಯಕ್ತಿಕ ವಿಷಯ, ಆಕ್ರೋಶ, ಸಿಟ್ಟು-ಸೆಡವುಗಳನ್ನು ಹೊರಹಾಕಲು ಫಸ್ಟ್‌ಹಾಫ್ ಬಳಸಿಕೊಂಡಿದ್ದಾರೆ.

ಹಾಗಾದರೆ ಜಗ್ಗೇಶ್ ಪಾತ್ರವೇನು..?
ಒಂದೆಡೆ ಅತ್ತ ನಾಯಕನೂ ಅಲ್ಲದೇ ರಂಗನಾಯಕನೂ ಆಗದ ಪರಿಸ್ಥಿತಿ ಜಗ್ಗೇಶ್ ಪಾತ್ರ ಎಂಬುದು ವಿಷಾದಕರ ಸಂಗತಿ. ಮೊದಲಾರ್ಧ ಒಂದೆರಡು ಹಾಡು-ದೃಶ್ಯಗಳಿಗೆ ಮಾತ್ರ ‘ರಂಗನಾಯಕ’ನ (ಜಗ್ಗೇಶ್) ಪಾತ್ರವನ್ನು ಸೀಮಿತಗೊಳಿಸಲಾಗಿದೆ. ನಾಯಕನಿಗೊಂದು ಇಂಟ್ರೊಡಕ್ಷನ್, ನಾಯಕ-ನಾಯಕಿಯ ಪರಿಚಯ, ಒಂದು ನಿರ್ದಿಷ್ಟ ಕಥನ, ನಿರೂಪಣೆ ಇಲ್ಲದೇ ಮಾತಿನಲ್ಲೇ ಮನೆ ಕಟ್ಟಲು ಪ್ರಯತ್ನಿಸಿದಂತಿದೆ ಗುರು ಕಾರ್ಯವೈಖರಿ.

ಬಿಡುಗಡೆಗೂ ಮುನ್ನ ಗುರುಪ್ರಸಾದ್ ಹಲವು ವೇದಿಕೆಗಳಲ್ಲಿ ಹಂಚಿಕೊಂಡಂತೆ ‘ನಾನೊಬ್ಬ ಹತಾಶ ಪ್ರೇಕ್ಷಕ’ ಎಂಬ ಮಾತು, ‘ರಂಗನಾಯಕ’ ನೋಡಿ ಹೊರಬಂದ ಪ್ರೇಕ್ಷಕರಲ್ಲೂ ಮೂಡುತ್ತದೆ ಮತ್ತು ಅವರನ್ನು ಮತ್ತಷ್ಟು ನಿರಾಸೆಗೊಳಿಸಿದ್ದಾರೆ ನಿರ್ದೇಶಕ ಗುರುಪ್ರಸಾದ್. ಕೆಲವೊಂದು ಸಿನಿಮಾದಲ್ಲಿ ಲಾಜಿಕ್ ಹುಡುಕಬಾರದು ನಿಜ. ಆದರೆ ಮ್ಯಾಜಿಕ್ ಕೂಡ ಮಾಡದಿದ್ದರೆ, ಗುರುವಿನ ಬರವಣಿಗೆಯ ಅಸ್ತಿತ್ವದ ಮೇಲೆಯೇ ಬೇಸರ, ಸಂಶಯ ಮೂಡಿಸುತ್ತದೆ.

ಸಣ್ಣ ವಿಷಯವೊಂದಕ್ಕೆ ಇನ್ನಿಲ್ಲದ ಸರಕುಗಳನ್ನು ತುಂಬಿ ಮಸಾಲೆ ರುಬ್ಬಲು ಹೊರಟಿರುವ ಗುರುಪ್ರಸಾದ್, ಪರದೆಯ ಮೇಲೆ ಅದ್ಭುತ ಸೃಷ್ಟಿ ಮಾಡುವಂತೆ ಪ್ರದರ್ಶನ ಕೊಡುತ್ತಾರೆ. ಒಬ್ಬ ಮೇರು ಕಲಾವಿದನನ್ನು ಸರಿಯಾಗಿ ಬಳಸಿಕೊಳ್ಳದೇ ನಿರಾಸೆಯುಂಟು ಮಾಡುತ್ತಾರೆ. ಇಡೀ ಸಿನಿಮಾದಲ್ಲಿ ‘ರಂಗನಾಯಕ’ನನ್ನೂ ಮೀರಿದ ಸ್ಕ್ರೀನ್‌ಸ್ಪೇಸ್ ತೆಗೆದುಕೊಂಡಿದ್ದಾರೆ.

ದ್ವಿತೀಯಾರ್ಧದಲ್ಲಿ ಶುರುವಾಗುವ ‘ರಂಗನಾಯಕ’ನ ಗೊಂಬೆಯಾಟದಲ್ಲಿ ಗುರುವಿನ ತಾಳಕ್ಕೆ ತಕ್ಕಂತೆ ನಾಯಕನನ್ನು ಕುಣಿಸಿಕೊಂಡಿದ್ದಾರೆ. ಕಥೆಯ ಪ್ರಕಾರ ಪೂರ್ವಜನ್ಮಕ್ಕೆ ಹೋದರೂ, ಭಾರತದಲ್ಲೇ ಮೊಟ್ಟ ಮೊದಲ ಕನ್ನಡ ಸಿನಿಮಾ ಎಂದರೂ… ಖ್ಯಾತ ಗೀತೆಗಳ ಝಲಕ್, ಸೋಷಿಯಲ್ ಮೀಡಿಯಾ ಕುರಿತ ಮಾತುಗಳು, ಕೆಲವು ನಟ-ನಟಿಯರ ಅನುಕರಣೆ… ಹೀಗೆ ಕಾಲಕ್ಕೆ ಅನುಗುಣವಿಲ್ಲದ ಮಾತು-ದೃಶ್ಯಗಳನ್ನು ಪೋಣಿಸಲಾಗಿದೆ.

ಒಬ್ಬ ಹತಾಶ ಪ್ರೇಕ್ಷಕನಿಗೆ ಮತ್ತಷ್ಟು ಚೈತನ್ಯ ತುಂಬುವ ಕೆಲಸ ಮಾಡುವುದನ್ನು ಬಿಟ್ಟು ಮತ್ತಷ್ಟು ನಿರಾಸೆ ಹೊತ್ತು ಕಳಿಸುವಂತೆ ಮಾಡುತ್ತಾನೆ ‘ರಂಗನಾಯಕ’. ಹಾಗೆ ನೋಡಿದರೆ ಜಗ್ಗೇಶ್ ಇದ್ದಷ್ಟು ಹೊತ್ತು ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಆದರೆ ಅಲ್ಲಿಯೂ ಕೆಲವೊಂದು ಅದೇ ಹಳೆಯ ಜಗ್ಗೇಶ್ ಮ್ಯಾನರಿಸಂ, ಡೈಲಾಗ್‌ಗಳನ್ನು ಸಹಿಸಿಕೊಳ್ಳುವುದು ಅಸಾಧ್ಯ. ಕಥೆಯ ಸಾರದಲ್ಲೇ ಸ್ವಾದವಿಲ್ಲ. ಹೀಗಾಗಿ ಇಲ್ಲಿ ತಾಂತ್ರಿಕ ಬಳಗದವರನ್ನು ಎಳೆತರದಿರುವುದೇ ಲೇಸು..!

Previous articleಕುತಂತ್ರಿ ನರಿಗಳ ಹಾವು-ಏಣಿ ಆಟ!
Next articleಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಮೋದಿ ಸಫಾರಿ