ಗುಟ್ಕಾ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ

ಹೊಸದುರ್ಗ: ಗುಟ್ಕಾ ವಿಚಾರವಾಗಿ ಆರಂಭವಾದ ಜಗಳದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ೧೧.೩೦ಕ್ಕೆ ನಡೆದಿದೆ. ಈ ಘಟನೆ ಸಂಬಂಧ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೋಡು ಗ್ರಾಮದ ಸೋಮಶೇಖರ(೨೫) ಕೊಲೆಯಾದ ವ್ಯಕ್ತಿ. ಈತನ ತಮ್ಮ ನಾಗರಾಜ ಮಂಜುನಾಥನ ಅಂಗಡಿಗೆ ಗುಟ್ಕಾ ತರಲು ಹೋದಾಗ ಅಂಗಡಿಯ ಮಾಲೀಕ ಫೋನ್ ಪೇ ಇಲ್ಲ ಕ್ಯಾಶ್ ಕೊಡು ಎಂದು ಕೇಳಿದ್ದಾನೆ.
ಈ ವಿಚಾರವಾಗಿ ರಘು ಎಂಬುವನು ನಾಗರಾಜನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದನ್ನು ವಿಚಾರಿಸಲು ಹೋದ ಸೋಮಶೇಖರನ ಮೇಲೆ ರಘು, ಮಂಜುನಾಥ, ಶಶಿಕುಮಾರ ಹಾಗೂ ಗವಿರಂಗನಾಥ ಸೇರಿಕೊಂಡು ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಸೋಮಶೇಖರನನ್ನು ಮತ್ತೋಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಕರೆದೊಯ್ಯಿದಿದ್ದಾರೆ. ಅಲ್ಲಿ ವೈದ್ಯರು ಸೋಮಶೇಖರ್ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಆರೋಪಿ ರಘು ಕಳೆದ ಮೂರು ವರ್ಷಗಳಿಂದ ನಾನು ಪೊಲೀಸ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಈತನ ಬೈಕ್ ಮೇಲೆ ಪೊಲೀಸ್ ಸ್ಟಿಕ್ಟರ್ ಹಾಕಿಸಿಕೊಂಡಿದ್ದನು. ಈತನ ಬಂಧನವಾದ ನಂತರ ಈತ ನಕಲಿ ಪೊಲೀಸ್ ಎಂದು ತಿಳಿದು ಬಂದಿದೆ.