ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಹಾಲಕ್ಷ್ಮಿ ದೇವಸ್ಥಾನದ ಎದುರು ನಾಗರ ಹಾವೊಂದು ಗಾಯಗೊಂಡು ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯ ಯುವಕ ದಾವುದ್ ಎಂಬಾತ ಆ ಹಾವನ್ನು ರಕ್ಷಿಸಿದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.
ಗಾಯಗೊಂಡ ಹಾವು ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಅದು ಸ್ವಲ್ಪ ಸ್ವಲ್ಪ ತೆವಲುತ್ತಿತ್ತು. ದಾವೂದ್ ಡಿವೈಡರಿನಲ್ಲಿದ್ದ ಹುಲ್ಲು ಕಡ್ಡಿಗಳನ್ನು ಹಾಕಿ, ವಾಹನ ನಾಗರ ಹಾವಿನ ಮೇಲೆ ಸಂಚರಿಸದಂತೆ ನೋಡಿಕೊಂಡು, ತುರ್ತಾಗಿ ಆಗಮಿಸಿ ಹಾವನ್ನು ರಕ್ಷಿಸುವಂತೆ ಟೋಲ್ ಗೇಟಿನ ಅಧಿಕಾರಿ ಶೈಲೇಶ್ ಶೆಟ್ಟಿಯವರಿಗೆ ದೂರವಾಣಿ ಕರೆ ಮಾಡಿ ವಿನಂತಿಸಿದ್ದಾನೆ.
ಟೋಲ್ ಗೇಟ್ ಸಿಬ್ಬಂದಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಅದನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಇದೇ ಸಂದರ್ಭ ಟೋಲ್ ಗೇಟ್ ಸಿಬ್ಬಂದಿ ಉರಗ ರಕ್ಷಕ ರಾಧಾಕೃಷ್ಣ ಹೆಜಮಾಡಿ ಅವರೊಂದಿಗೆ ಆಗಮಿಸಿ, ನಾಗರಹಾವನ್ನು ಪರಿಶೀಲಿಸಿದಾಗ ಅದರ ಕರುಳು ಕಿತ್ತು ಹೊರಗೆ ಬಂದಿತ್ತು. ಅದೇ ಸಮಯಕ್ಕೆ ಅರಣ್ಯ ಅಧಿಕಾರಿಯವರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಹಾವನ್ನು ಶುಶ್ರೂಷೆಗಾಗಿ ನೀಡಲಾಯಿತು. ಪಶು ವೈದ್ಯರು ಆಗಮಿಸಿ, ನಾಗರಹಾವನ್ನು ಪರೀಕ್ಷಿಸಿ, ಶುಶ್ರೂಷೆ ಅಸಾಧ್ಯ ಎಂದಿದ್ದಾರೆ.
ಟೋಲ್ ಗೇಟ್ ಸಿಬ್ಬಂದಿಯವರು ನಾಗರಹಾವನ್ನು ಹಾವಂಜೆ ದೇವಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಚಿಕಿತ್ಸೆಗೆ ಪ್ರಯತ್ನ ಪಟ್ಟರೂ, ಹಾವು ಇಹಲೋಕ ತ್ಯಜಿಸಿದೆ.
ಟೋಲ್ ಗೇಟ್ ಸಿಬ್ಬಂದಿ ಮೃತಪಟ್ಟ ಹಾವಿನ ಅಂತ್ಯ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಹಾವಂಜೆ ದೇಗುಲದಲ್ಲಿ ಬುಧವಾರ ಸಂಜೆ ನೆರವೇರಿಸಿದ್ದಾರೆ.
ಗಾಯಗೊಂಡ ನಾಗರ ಹಾವನ್ನು ಕಂಡು ಸುಮಾರು ಒಂದು ಗಂಟೆಯ ಕಾಲ ರಕ್ಷಿಸಿದ ಮುಸ್ಲಿಂ ಯುವಕನಿಗೆ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.