ಜಯರಾಮ ಶೆಟ್ಟಿ
ಬಾಗಲಕೋಟೆ(ಮಹಾಲಿಂಗಪುರ): ಬಾಲಿವುಡ್ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಯುವಕ ರಮ್ಜಾನ್ ಮಲಿಕಸಾಬ ಪೀರಜಾದೆ ಭಾಗವಹಿಸಿ ೫೦ ಲಕ್ಷಗಳ ನಗದು ಪುರಸ್ಕಾರ ಪಡೆದು ಮಹಾಲಿಂಗಪುರ ಪಟ್ಟಣದ ಹೆಸರು ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡಿದ್ದಾನೆ.
ಪ್ರಸಿದ್ಧ ಕೆಬಿಸಿ ಕ್ವಿಜ್ ಸ್ಪರ್ಧೆಯಲ್ಲಿ ಕರೋಡ್ ಪತಿ ಪ್ರಶಸ್ತಿ ಪಡೆದು ಮಹಾಲಿಂಗಪುರ ಪಟ್ಟಣದ ಹೆಸರು ನಾಡಿನಾದ್ಯಂತ ಬೆಳಗಲಿ ಎನ್ನುವ ಕಾರಣಕ್ಕೆ ಸತತ ಪ್ರಯತ್ನ ಪಡುತ್ತ ಒಂದು, ಎರಡು ಅಲ್ಲ ಮೂರು ಬಾರಿ ಭಾಗವಹಿಸಿ, ಕೊನೆಯದಾಗಿ ಹಿಂದಿ ಚಿತ್ರ ನಗರಿಯ ಭೀಷ್ಮ ಅಮಿತಾಬ್ ಬಚ್ಚನ್ ಎದುರಿಗೆ ಹಾಟ್ ಶೀಟ್ ಅಲಂಕರಿಸುವ ಸೌಭಾಗ್ಯ ಪಡೆದುಕ್ಕೊಂಡಿದ್ದಾನೆ.
ಈ ಸಂದರ್ಭದಲ್ಲಿ ಹದಿನಾಲ್ಕು ಜಟೀಲ ಪ್ರಶ್ನೆಗಳಿಗೆ ಉತ್ತರಿಸಿ ೧೫ನೇ ಪ್ರಶ್ನೆಗೆ ಜಾಣ್ಮೆಯ ಕ್ವಿಟ್ ಪಡೆದು ಅಗ್ರ ಶ್ರೇಯಾಂಕದ ಕೋಟಿ ಅವಾರ್ಡ್ ದಕ್ಕದೆ ಹೋದರೂ ೫೦ ಲಕ್ಷಗಳ ಮೊತ್ತದ ಚೆಕ್ ತನ್ನದಾಗಿಸಿಕ್ಕೊಂಡಿದ್ದಾನೆ. ಈ ಸಂದರ್ಭದಲ್ಲಿ ಹಿರಿಯ ನಟ ಅಮಿತಾಭಜೀ ಅವರು ರಮ್ಜಾನ್‌ಗೆ ಶುಭ ಹಾರೈಸಿ ಕೆಬಿಸಿ ನೀಡಿರುವ ಈ ಹಣವನ್ನು ಸುಭದ್ರ ಬದುಕು ಕಟ್ಟಿಕೊಳ್ಳಲು ವಿನಿಯೋಗಿಸಿ ಎಂದು ಸಲಹೆ ನೀಡಲು ಮರೆಯಲಿಲ್ಲ.
ಈತ ಬಡ ಕುಟುಂಬದಲ್ಲಿ ಜನಿಸಿದಾತ. ತಾಯಿ ಮುನೇರಾ ತಮ್ಮ ಮನೆಯ ಕೆಲಸದಲ್ಲಿ ನಿರತರು. ತಂದೆ ಮಲಿಕ್‌ಸಾಬ್ ಗ್ಯಾಸ್ ವೆಲ್ಡರ್, ಬಂದ ಅಲ್ಪ ಸ್ವಲ್ಪ ಆದಾಯದಲ್ಲಿ ಮಕ್ಕಳ ಶಿಕ್ಷಣ ಮತ್ತು ಮನೆ ನಿರ್ವಹಣೆ ನಡೆಯುತ್ತಿದ್ದು, ಹೇಗೋ ಸ್ವಾಭಿಮಾನದ ಜೀವನ ಸಾಗಿದೆ. ಇಂತಹ ಆರ್ಥಿಕ ಬಿಕ್ಕಟ್ಟಿನಲ್ಲಿಯೇ ಕೆಬಿಸಿ ಸ್ಪರ್ಧಿ ರಮ್ಜಾನ್ ಹೊಟೆಲ್ ಒಂದರಲ್ಲಿ ೫ ಗಂಟೆಗಳ ಕಾಲ ಮತ್ತು ಟೆನಿಸ್ ಕೋರ್ಟ್ ವಾಚಮನ್ ಆಗಿ ಕೆಲಸ ಮಾಡಿ ಬರುವ ಆದಾಯದಲ್ಲಿ ಶಾಲಾ ಮತ್ತು ಸ್ವಂತ ಖರ್ಚನ್ನು ನಿಭಾಯಿಸಿಕೊಂಡು ಓದು ಮುಂದುವರೆಸಿದ್ದಾನೆ.
ಮಹಾಲಿಂಗಪುರ ಎಸ್‌ಸಿಪಿ ಸಂಸ್ಥೆಯ ಕಾಲೇಜಿನಲ್ಲಿ ಬಿಎ ಪದವಿಯನ್ನು ಪೂರೈಸಿ, ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮುಂದುವರಿಸಿದ್ದಾನೆ. ಈ ಸರಣಿ ಕಾರ್ಯಕ್ರಮ ಜನವರಿ ೧೩ ರಂದು ಸೋಮವಾರ ರಾತ್ರಿ ಸೋನಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.