ಕೇಂದ್ರದಿಂದ ಬರ ಪರಿಹಾರ ಸಿಕ್ಕಿಲ್ಲ

0
16

ಬೆಂಗಳೂರು: ಬರ ಪರಿಹಾರ ಸಿಕ್ಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದಲ್ಲಿ ಬರ ಘೋಷಣೆ ಆದ ಬಳಿಕ ನಾವು ಸೆಪ್ಟೆಂಬರ್ 23ರಂದೇ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೇವೆ. ಅಕ್ಟೋಬರ್ ನಲ್ಲಿ ಕೇಂದ್ರ ತಂಡ ರಾಜ್ಯ ಪ್ರವಾಸ ಮಾಡಿ ಬರ ಕುರಿತಂತೆ ವರದಿ ನೀಡಿದೆ. ಅದೇ ತಿಂಗಳಲ್ಲಿಯೇ ಮೂರು ಮನವಿಗಳನ್ನು ಸಲ್ಲಿಸಿದ್ದೇವೆ. ನಂತರ ಡಿಸೆಂಬರ್ 19ರಂದು ನಾನು ಖುದ್ದು ಪ್ರಧಾನ ಮಂತ್ರಿಗಳನ್ನು ಹಾಗೂ 20ರಂದು ಅಮಿತ್ ಶಾ ಅವರನ್ನು ಭೇಟಿಯಾಗಿ, ರಾಜ್ಯದ ಬರ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ತಿಳಿಸಿದ್ದೇನೆ. ಡಿಸೆಂಬರ್ 23ಕ್ಕೆ ಉನ್ನತ ಮಟ್ಟದ ಸಮಿತಿ ಸಭೆ ನಡೆಸುವುದಾಗಿ ಅಮಿತ್‌ ಶಾ ಅವರು ತಿಳಿಸಿದ್ದರು. ಮನವಿ ಸಲ್ಲಿಸಿ ಐದು ತಿಂಗಳು ಕಳೆದಿದ್ದರೂ ಅವತ್ತಿಂದ, ಇವತ್ತಿನವರೆಗೂ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಬರ ಪರಿಹಾರವನ್ನು ನೀಡಿಲ್ಲ. ದೇಶದ ಗೃಹ ಸಚಿವರಾದ ಅಮಿತ್‌ ಶಾ ಅವರು ಸತ್ಯವನ್ನೂ ನಾಚಿಸುವಂತೆ ಅಪ್ಪಟ ಸುಳ್ಳು ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ನಿರೂಪಿಸಲು ಸಿದ್ಧವಿದ್ದೇನೆ. ಕೇಂದ್ರದ ಈ ಧೋರಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಕದವನ್ನೂ ತಟ್ಟಿದ್ದೇವೆ. ದೇಶದ ವಿವಿಧೆಡೆಗಳಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡಲೆಂದು 15ನೇ ಹಣಕಾಸು ಆಯೋಗದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಕೇಂದ್ರಕ್ಕೆ ನೀಡಲಾಗಿರುತ್ತದೆ. ಎನ್ ಡಿ ಆರ್ ಎಫ್ ಹಣ ರಾಜ್ಯಗಳಿಗೆ ಸೇರಿದ್ದು. ರಾಜ್ಯದ ಜನ ಬರಗಾಲದಿಂದ ತತ್ತರಿಸಿದ್ದರೂ ಸ್ಪಂದಿಸದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ.

Previous articleಯದುವೀರ್ ನಾಮಪತ್ರ ಸಲ್ಲಿಕೆ
Next articleಹೈಕೋರ್ಟ್ ಹಾಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ