ಪ್ರಶ್ನೆ ಪತ್ರಿಕೆ ತಯಾರು ಮಾಡುವುದ್ರಲ್ಲಿ ಹಾಗೂ ತರ್ಜುಮೆಯಲ್ಲಿ ಕೆ.ಪಿ.ಎಸ.ಸಿ ಮತ್ತೊಮ್ಮೆ ತನ್ನ ಅಸಮರ್ಥತೆಯನ್ನು ತೋರಿಸಿದೆ
ಬೆಂಗಳೂರು: ಪ್ರಶ್ನೆ ಪತ್ರಿಕೆ ತಯಾರು ಮಾಡುವ ಸಮಿತಿಯ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ವಿಶ್ಲೇಷಣಾಪ್ರಜ್ಞೆ, ಅವಲೋಕನ ಸಾಮರ್ಥ್ಯ ಹಾಗೂ ಚಿಂತನಶೀಲತೆ ಇರಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಆಂಗ್ಲದಲ್ಲಿರುವ ವಾಕ್ಯವನ್ನು ಸರಿ ಎಂದು ಪರಿಗಣಿಸಿದರೆ, ಕನ್ನಡದಲ್ಲಿರುವ ಪ್ರಶ್ನೆಯನ್ನು ನೋಡಿ ಉತ್ತರ ಕೊಟ್ಟವರಿಗೆ ಅನ್ಯಾಯ ಆಗುತ್ತದೆ. ಮುಖ್ಯ ಪರೀಕ್ಷೆಗೆ ಆಯ್ಕೆಯಾಗಲು 0.25 ಅಂಕಗಳು ಸಹ ಮುಖ್ಯವಾಗುತ್ತದೆ.
ಪ್ರಶ್ನೆ ಪತ್ರಿಕೆ ತಯಾರು ಮಾಡುವಾಗ ಈ ರೀತಿಯಾದ ಸೂಕ್ಷ್ಮ ಅಂಶಗಳನ್ನು ಪರಿಗಣಿಸಿ ಆಂಗ್ಲ-ಕನ್ನಡ ಎರಡರಲ್ಲೂ ಒಂದೇ ಅರ್ಥ ಬರುವ ವಾಕ್ಯ ರಚನೆ ಮಾಡಬೇಕು. ಪ್ರಶ್ನೆ ಪತ್ರಿಕೆ ತಯಾರು ಮಾಡುವ ಸಮಿತಿಯ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ವಿಶ್ಲೇಷಣಾಪ್ರಜ್ಞೆ, ಅವಲೋಕನ ಸಾಮರ್ಥ್ಯ ಹಾಗೂ ಚಿಂತನಶೀಲತೆ ಇರಬೇಕು. ಇಲ್ಲವಾದಲ್ಲಿ, ಈ ರೀತಿ ಒಂದರಮೇಲೊಂದು ಎಡವಟ್ಟುಗಳು ಆಗುತ್ತವೆ.
ಸಮಯದ ಕೊರತೆ, ಕೋರ್ಟ್ ಕೆಲಸ, ಪ್ರಶ್ನೆ ಪತ್ರಿಕೆ ವಿಮರ್ಶೆ ಮಾಡಲು ಸಮಯ ಸಾಕಾಗಲಿಲ್ಲ ಇತ್ಯಾದಿ ಕಾರಣಗಳನ್ನು ಕೊಡುವುದು ಸರ್ಕಾರ ಹಾಗೂ ಲೋಕಸೇವಾ ಆಯೋಗದ ಅದಕ್ಷತೆಗೆ ಹಿಡಿದ ಕೈಗನ್ನಡಿ. ಅಷ್ಟಕ್ಕೂ, ಈ ರೀತಿಯಾದ ತಪ್ಪುಗಳನ್ನು ಮಾಡಿರುವುದು ಮೊದಲನೇ ಬಾರಿ ಏನಲ್ಲ.
ಪ್ರಶ್ನೆ ಪತ್ರಿಕೆ ತಯಾರು ಮಾಡುವುದ್ರಲ್ಲಿ ಹಾಗೂ ತರ್ಜುಮೆಯಲ್ಲಿ ಕೆ.ಪಿ.ಎಸ.ಸಿ ಮತ್ತೊಮ್ಮೆ ತನ್ನ ಅಸಮರ್ಥತೆಯನ್ನು ತೋರಿಸಿದೆ. ಈಗ ಈ ತಪ್ಪನ್ನು ಸರಿಪಡಿಸಲು ಮತ್ತೊಂದು ತಪ್ಪನ್ನು ಮಾಡದೆ, ಈ ಪ್ರಶ್ನೆಗೆ ಕೃಪಾಂಕ ಕೊಟ್ಟು ಯಾರಿಗೂ ಅನ್ಯಾಯ ಆಗದಂತೆ ಕ್ರಮ ವಹಿಸಲಿ ಎಂದಿದ್ದಾರೆ.