ಕಾಡಿನ ಸುತ್ತಮುತ್ತ ಕಾಡುವ ಕಥನ

0
24

ಚಿತ್ರ: ಅಧಿಪತ್ರ
ನಿರ್ದೇಶನ: ಚಯನ್ ಶೆಟ್ಟಿ
ನಿರ್ಮಾಣ: ದಿವ್ಯ ನಾರಾಯಣ್, ಕುಲದೀಪ್ ರಾಘವ
ತಾರಾಗಣ: ರೂಪೇಶ್ ಶೆಟ್ಟಿ, ಜಾಹ್ನವಿ, ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್ ಇತರರು.

ಬಹುತೇಕ ಸಿನಿಮಾಗಳಲ್ಲಿ ನಾಯಕನ ಸುತ್ತುವ ಕಥೆಗಳನ್ನೇ ಹೆಣೆಯಲಾಗುತ್ತದೆ. ಆತನ ಎಂಟ್ರಿಗೂ ಧೂಳು, ಡ್ಯಾನ್ಸ್, ಫೈಟ್ ಮಾಡುವಾಗಲೂ ಧೂಳುಮಯ..! ಅಗತ್ಯವಿರದಷ್ಟು ಬಿಲ್ಡಪ್, ಸ್ಲೋ ಮೋಷನ್ ಶಾಟ್‌ಗಳಿಗೇನೂ ಬರವಿಲ್ಲ. ಆದರೆ ತೀರಾ ಬೆರಳೆಣಿಕೆಯ ಸಿನಿಮಾಗಳಲ್ಲಿ ಮಾತ್ರ ಕತೆಗೆ ಒತ್ತು ಕೊಟ್ಟು, ಕಲಾವಿದರನ್ನು ಸಮರ್ಪಕವಾಗಿ ಬಳಸಿಕೊಂಡು, ಮಣ್ಣಿನ ಸೊಗಡಿನ ಘಮ ಬೆರೆತಿರುವಂತೆ ಕಟ್ಟಿಕೊಡಲಾಗಿರುತ್ತದೆ.

‘ಅಧಿಪತ್ರ’ ಅವೆರಡೂ ಕೆಟಗರಿಗೆ ಸೇರದೇ ಇದ್ದರೂ, ಇಲ್ಲಿ ಬಿಲ್ಡಪ್ ಇಲ್ಲ. ವಿನಾಕಾರಣ ಹಾಡು ನುಸುಳುವುದಿಲ್ಲ. ಬೇಡವೆಂದರೂ ಫೈಟ್ ಬರುವುದಿಲ್ಲ. ತಿಳಿ ಹಾಸ್ಯ, ಎಷ್ಟು ಬೇಕೋ ಅಷ್ಟು ಸಸ್ಪೆನ್ಸ್, ಥ್ರಿಲ್ಲರ್ ಜತೆಗೆ ಕಾಡಿನಲ್ಲಿ ಕಾಡುವಂಥ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಚಯನ್ ಶೆಟ್ಟಿ.

ಇಲ್ಲಿ ಕಥೆಗೆ ಮಹತ್ವವಿದೆ. ನಿರೂಪಣೆಗೆ ಸಮಯ ತೆಗೆದುಕೊಳ್ಳಲಾಗಿದೆ. ಚಿತ್ರಕಥೆ ಕೊಂಚ ಸಡಿಲ ಎನಿಸಿದರೂ ನೋಡಿಸಿಕೊಂಡು ಹೋಗುವ ಗುಣವಿದೆ. ಕರಾವಳಿ ಭಾಗದಲ್ಲಿ ನಡೆಯುವ ಒಂದಷ್ಟು ಘಟನೆಗಳಿಗೆ ‘ಅಧಿಪತ್ರ’ ಸಾಕ್ಷಿಯಾಗುತ್ತದೆ. ಅಲ್ಲಿನ ಸಂಸ್ಕೃತಿ, ಭಾಷೆ, ಸೊಗಡು, ವೇಷಗಳನ್ನು ಸಿನಿಮಾದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ ನಿರ್ದೇಶಕ. ಹೀಗಾಗಿ ‘ಮುಂದೇನೋ ಇದೆ’ ಎನ್ನುವಷ್ಟು ಕುತೂಹಲ ಸಿನಿಮಾದುದ್ದಕ್ಕೂ ಕಾಪಿಟ್ಟುಕೊಳ್ಳುವಲ್ಲಿ ಚಯನ್ ಯಶಸ್ವಿಯಾಗಿದ್ದಾರೆ. ಆದರೆ ಕೆಲವೊಂದು ಅನಾವಶ್ಯಕ ದೃಶ್ಯಗಳನ್ನು ಮತ್ತಷ್ಟು ಟ್ರಿಮ್ ಮಾಡಿದ್ದರೆ, ಸಿನಿಮಾ ಮತ್ತಷ್ಟು ಸೊಗಸಾಗಿರುವ ಸಾಧ್ಯತೆಗಳಿದ್ದವು.

ಪೊಲೀಸ್ ಆಫೀಸರ್ ಪಾತ್ರದಲ್ಲಿ ರೂಪೇಶ್ ಶೆಟ್ಟಿ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಗಂಭೀರವಾಗಿಯೂ, ಮತ್ತೊಮ್ಮೆ ಛೇಡಿಸುವಾಗ ಪತ್ರದ ಆಳ-ಅಗಲ ಅರಿತು ಅಭಿನಯಿಸಿದ್ದಾರೆ. ಜಾಹ್ನವಿ ಸಿಕ್ಕ ಅವಕಾಶವನ್ನು ನೀಟಾಗಿ ಬಳಸಿಕೊಂಡಿದ್ದಾರೆ. ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್ ಮುಂತಾದವರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.

Previous articleಬಿಜೆಪಿಗೆ ಮುನ್ನಡೆ, ಮತದಾರನ ಒಲವು ಯಾರ ಕಡೆ…
Next articleಬೀದರ್ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ : ಮಗಳ ಕೊಲೆ ಮಾಡಿ ಪರಾರಿಯಾದ ತಂದೆ