ದಾವಣಗೆರೆ: ಸಿ.ಟಿ. ರವಿಗೆ ಯಾವುದೇ ನೋಟೀಸ್ ನೀಡದೆ ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಛೀಮಾರಿ ಹಾಕಿದ್ದು, ಈ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ಸರ್ಕಾರ ವಿಸರ್ಜಿಸಲಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದರು.
ಸಿಟಿ ರವಿ ಅವರ ಯಾವ ಆರೋಪಕ್ಕೆ ಬಂಧನವಾಯಿತು ಎಂಬ ಬಗ್ಗೆ ಇದುವರೆಗೂ ನಮಗೆ ಸ್ಪಷ್ಟನೆ ಸಿಕ್ಕಿಲ್ಲ. ಈಗಾಗಲೇ ಕೋರ್ಟ್ ಸರ್ಕಾರದ ನಡವಳಿಕೆಗೆ ಛೀಮಾರಿ ಹಾಕಿದೆ. ಸರ್ಕಾರಕ್ಕೆ ಇದೊಂದು ಪ್ರಕರಣ ಕಪ್ಪು ಚುಕ್ಕೆ ಇದ್ದಂತೆ ಎಂದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರನ್ನು ಬಂಧಿಸಿಲ್ಲ, ಅವರಿಗೆ ಕೇವಲ ನೋಟಿಸ್ ಕೊಟ್ಟು ಬಂಧಿಸಿದ ಬಳಿಕ ಬಿರಿಯಾನಿ, ಕಬಾಬ್ ಕೊಟ್ಟ ಸರ್ಕಾರವಿದು. ಆದರೆ ಸಿ.ಟಿ ರವಿಯವರು ಮಾಡಿದ ಯಾವ ತಪ್ಪಿಗೆ ಬಂಧಿಸಿದರು ಎಂಬುದರ ಬಗ್ಗೆ ಉತ್ತರ ಕೂಡ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆ ಅಥವಾ ವಿಧಾನಪರಿಷತ್‌ನಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಶಿಕ್ಷೆ ಕೊಡಲು ನ್ಯಾಯಾಧೀಶರ ಎಂದು ಪ್ರಶ್ನಿಸಿದವರು, ಇವರು ಕ್ಷಮಾಪಣೆ ಕೇಳಲು ಹೇಳುತ್ತಾರೆ ನಮ್ಮ ತಪ್ಪು ಸಾಬಿತಾದ ನಂತರ ಕೇಳುತ್ತೇವೆ ಎಂದರು.
ಈಗಾಗಲೇ ಹುಬ್ಬಳ್ಳಿ ಕೇಸ್ ಅನ್ನು ವಾಪಸ್ ಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ನಾಳೆ ಡಿ.ಜೆ ಹಳ್ಳಿ ಪ್ರಕರಣವನ್ನು ಕೂಡ ಹಿಂಪಡೆಯಲು ತಯಾರಿದೆ. ಸಿಟಿ ರವಿ ಒಬ್ಬ ಹಿಂದೂ ಕಾರ್ಯಕರ್ತ ಆದ್ದರಿಂದಲೇ ಅವರನ್ನು ಗುರಿ ಮಾಡಿ ಬಗ್ಗು ಬಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿ.ಟಿ. ರವಿ ಮಾತನಾಡಿ, ಕಾಂಗ್ರೆಸ್ ಪೊಲೀಸ್ ಬಲ ದುರುಪಯೋಗ ಪಡಿಸಿಕೊಂಡು ನನ್ನನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ. ಈಗಾಗಲೇ 35 ವರ್ಷಗಳ ಹಿಂದೆಯೇ ಇಂಥ ಬಲಪ್ರಯೋಗ ಅನುಭವಿಸಿ ಗಟ್ಟಿಯಾಗಿದ್ದೇನೆ. ಎಂಥ ಹೋರಾಟಕ್ಕೂ ನಾನು ಸಿದ್ಧ ಎಂದರು.
ಸತ್ಯಮೇವ ಜಯತೆ ಎಂಬುದನ್ನಷ್ಟೇ ನಾನು ನಂಬಿದ್ದೇನೆ. ಅದರಂತೆ ಈಗ ಕೋರ್ಟ್ ನಿಂದ ನನಗೆ ಜಾಮೀನು ಸಿಕ್ಕಿದೆ. ಪಕ್ಣದ ನಾಯಕರು, ಕಾರ್ಯಕರ್ತರು, ಮುಖಂಡರ ಸ್ಪಂದನೆಗೆ ನಾನು ಅಭಾರಿಯಾಗಿದ್ದೇನೆ ಎಂದರು.
ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.