ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ, ಸಿಪಿಎಂ ನಾಯಕ ಬಯ್ಯಾರೆಡ್ಡಿ ನಿಧನ

0
63

ಬೆಂಗಳೂರು: ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ. ಬಯ್ಯಾರೆಡ್ಡಿ ಇಂದು ಮುಂಜಾನೆ ನಸಹುಕಿನ ವೇಳೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೀರ್ಘಕಾಲ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದ ಬಯ್ಯಾರೆಡ್ಡಿ ಕಳೆದೊಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಬಯ್ಯಾರೆಡ್ಡಿ ಅವರ ಮೃತದೇಹವನ್ನು ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸಿಪಿಐ(ಎಂ) ಪಕ್ಷದ ರಾಜ್ಯ ಕಚೇರಿ ಇಎಂಎಸ್ ಭವನದಲ್ಲಿ ಅಂತಿಮ‌ ದರ್ಶನಕ್ಕೆ ಇಡಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ತಿಳಿಸಿದೆ. ನಾಳೆ (ಜ.5) ಬೆಳಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಯ್ಯಾರೆಡ್ಡಿಯವರ ಸ್ವಗ್ರಾಮ ಗಡಿಗವಾರಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸಿಎಂ ಸಂತಾಪ: ಸಿಪಿಐ(ಎಂ) ನಾಯಕ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ಅವರ ನಿಧನದದಿಂದ ದು:ಖಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ಭೇಟಿಯಾದಾಗೆಲ್ಲ ದೇಶದ ರೈತರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದರು. ಈ ಸಮುದಾಯಗಳಿಗೆ ನ್ಯಾಯ ಕೊಡಿಸಲು ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದ ಬಯ್ಯಾರೆಡ್ಡಿಯವರು ಒಬ್ಬ ದಣಿವರಿಯದೆ ಇದ್ದ ಜನಪರ ಹೋರಾಟಗಾರ. ಅವರ ಕುಟುಂಬ ವರ್ಗ ಮತ್ತು ಹಿತೈಷಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.

Previous articleನ್ಯಾಷನಲ್ ಶೂಟಿಂಗ್‌ನಲ್ಲಿ ಮಿಂಚಿದ ಮಂಡ್ಯದ ಮಗಳು
Next articleಮಹಿಳಾ ಕ್ರಿಕೆಟ್: ವಿಜಯಪುರದ ಪ್ರಿಯಾ ಶಂಕರ ಚವ್ಹಾಣ್ ಆಯ್ಕೆ