ಬೆಂಗಳೂರು: ಸರ್ಕಾರಿ ಶಾಲೆಯ ಮಕ್ಕಳು ಇಂದು ಉತ್ತಮ ರ‍್ಯಾಂಕ್‌ಗಳಿಸಿ, ಸಾಧನೆ ಮಾಡುತ್ತಿದ್ದಾರೆ. ಅವರ ಸಾಧನೆಗೆ ನಮ್ಮ ಸರ್ಕಾರದ ಸಾಥ್ ಖಂಡಿತಾ ಇದೆ. ಎರಡು ಸಾವಿರದಷ್ಟು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು, ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಮಾದರಿಯನ್ನು ಅಳವಡಿಸಿಕೊಳ್ಳಲು ಸರ್ಕಾರ ಗುರಿಯನ್ನಿಟ್ಟುಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇಂದು ಆಡುಗೋಡಿಯ ಅಯ್ಯಪ್ಪ ಗಾರ್ಡನ್‌ನಲ್ಲಿರುವ ಪಟೇಲ್ ಮುನಿಚಿನ್ನಪ್ಪ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ, ಶೈಕ್ಷಣಿಕ ಚಟುವಟಿಕೆಗಳನ್ನು ಶುಭಾರಂಭಗೊಳಿ ಮಾತನಾಡಿ, ಮಕ್ಕಳೇ, ಜ್ಞಾನ ದೇಗುಲಕ್ಕೆ ಮರಳಿ ಬನ್ನಿ! ಮಕ್ಕಳು ನಮ್ಮ ದೇಶದ ಆಸ್ತಿ. ಜ್ಞಾನದ ಬೀಜವನ್ನು ಬಿತ್ತಿದರೆ ಅವರು ಸತ್ಪ್ರಜೆಗಳಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಶಿಕ್ಷಣದ ಬೇರು ಕಹಿಯಾಗಿದ್ದರೂ, ಅದರ ಫಲ ಸಿಹಿಯಾಗಿರುತ್ತದೆ. ಅಗ್ನಿಯಲ್ಲಿ ಸುಡಲಾಗದ, ನೀರಲ್ಲಿ ನೆನೆಸಲಾಗದ, ಯಾರಿಂದಲೂ ಕಿತ್ತುಕೊಳ್ಳಲಾಗದ ಗುಪ್ತನಿಧಿ ವಿದ್ಯೆ. ನನಗೆ ಶಿಕ್ಷಣದ ಶಕ್ತಿಯ ಬಗ್ಗೆ ಅಪಾರವಾದ ನಂಬಿಕೆ ಇದೆ. ನಾನು ಮಂತ್ರಿ ಪದವಿಯನ್ನು ಪಡೆದಾಗ ಆದ ಸಂತೋಷಕ್ಕಿಂತ ಪದವೀಧರನಾದಾಗ ಅನುಭವಿಸಿದ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ ಎಂದರು.