ವಿಜಯಪುರ: ವಕ್ಫ್ ದೊಡ್ಡ ಆತಂಕ ಸೃಷ್ಟಿ ಮಾಡಿದೆ, ಈ ಕರಾಳ ಕಾಯ್ದೆಯಿಂದಾಗಿ ರೈತ ಬಂಧುಗಳು ಸಾವು ಬದುಕಿನ ಹೋರಾಟ ಮಾಡುವಂತಾಗಿದೆ, ಕರ್ನಾಟಕದಲ್ಲಿ ಲವ್ ಜಿಹಾದ್ ನಂತರ ಲ್ಯಾಂಡ್ ಜಿಹಾದ್ ಹಾಗೂ ಲ್ಯಾಂಡ್ ಟೆರರಿಸಂ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ವಕ್ಫ್ ತಿದ್ದುಪಡಿ ಕಾಯ್ದೆ ಪರಿಶೀಲನೆಗೆ ರಚನೆ ಮಾಡಲಾಗಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ ಸ್ಥಳದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಲ್ಯಾಂಡ್ ಜಿಹಾದ್ ಹಾಗೂ ಲ್ಯಾಂಡ್ ಟೆರರಿಸಂ ಅಧಿಕವಾಗಿದೆ, ಮುಸಲ್ಮಾನರ ಜಮೀನು ಸಹ ಕಬಳಿಕೆಯಾಗಿದೆ. ಈ ಕಾಯ್ದೆ ರದ್ದಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಎಲ್ಲ ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ನಡೆಸಿ ಜಿಲ್ಲಾಧಿಕಾರಿ, ಸಂಬಂಧಿಸಿದ ಅಧಿಕಾರಿಗಳಿಗೆ ಧಮ್ಕಿ ಹಾಕಿ ರೈತರ ಜಮೀನುಗಳಿಗೆ ವಕ್ಫ್ ದಾಖಲು ಮಾಡಿದ್ದಾರೆ ಎಂದರು.
೨೯ ಸಾವಿರ ಎಕರೆ ವಕ್ಫ್ ಭೂಮಿ ಕಾಂಗ್ರೆಸ್ ನಾಯಕರಿಂದ ದುರ್ಬಳಕೆಯಾಗಿದೆ, ಹೀಗಾಗಿಯೇ ಸಂಸತ್ ನಲ್ಲಿ ಧ್ವನಿ ಎತ್ತಿದ್ದೆ. ಅದರ ಡಿಜಟಲೀಕರಣಕ್ಕೆ ಒತ್ತಾಯಿಸಿದ್ದೆ ಎಂದರು.

























