ಬಾಗಲಕೋಟೆ(ಕುಳಗೇರಿ ಕ್ರಾಸ್): ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕಬ್ಬು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ರವಿವಾರ ರಾತ್ರಿ 11ರ ಸುಮಾರಿಗೆ ನಡೆದಿದೆ.
ಗ್ರಾಮದಿಂದ ಹುಬ್ಬಳ್ಳಿ ಕಡೆಗೆ ಹೋಗುವ ರಸ್ತೆಯ ಇಕ್ಕಟ್ಟಾದ ಹಳ್ಳದ ಸೇತುವೆಯ ಮೇಲೆ ಲಾರಿ ಮಗುಚಿ ಬಿದ್ದಿದ್ದು ಅದೃಷ್ಟವಶಾತ್ ಲಾರಿ ಬಿದ್ದ ತಕ್ಷಣವೇ ಸ್ಥಳೀಯರ ಸಹಾಯದಿಂದ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗ್ರಾಮದ ಸಮಿಪದ ಎಂಆರ್‌ಎನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಮಾರ್ಗಮಧ್ಯೆ ಈ ಘಟನೆ ಸಂಭವಿಸಿದೆ. ಲಾರಿ ಉರುಳಿದ ರಬಸಕ್ಕೆ ಸೇತುವೆಯ ತಡೆಗೋಡೆ ತುಂಡಾಗಿ ಬಿದ್ದಿದೆ.
ಟ್ರಾಫಿಕ್ ಸಮಸ್ಯೆ: ಲಾರಿ ಪಲ್ಟಿಯಾಗಿ ಸುಮಾರು 18 ಗಂಟೆಗಳ ಕಾಲ ಲಾರಿ ರಸ್ತೆಯಲ್ಲೇ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೂ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ಪ್ರಯಾಣಿಕರು ಸುಸ್ತಾದರೆ ಚಾಲಕರು ಬೇಸತ್ತು ಹೋಗಿದ್ದರು.
ಕಿಮೀ ಗಟ್ಟಲೇ ವಾಹನಗಳು ನಿಂತಿದ್ದರಿಂದ ಪಾದಚಾರಿಗಳಂತು ರಸ್ತೆ ದಾಟುವುದು ಸಂಚರಿಸುವುದು ಕಷ್ಟವಾಗಿತ್ತು. ಟ್ರಾಫಿಕ್ ಸಮಸ್ಯೆ ಬಗೆಹರಿಸುವಲ್ಲಿ ಪೊಲೀಸರು ಸಹ ಬೆಳಿಗ್ಗೆಯಿಂದ ಸಂಜೆವರೆಗೂ ಹರಸಾಹಸ ಪಟ್ಟರು.