ಬೆಂಗಳೂರು: ಕನ್ನಡದ ಯುವಕನ ಮೇಲೆ ಕನ್ನಡದ ನೆಲದಲ್ಲೇ ಹಲ್ಲೆ ನಡೆಸುವ ದುಸ್ಸಾಹಸಕ್ಕೆ ಮುಂದಾಗುವ ವ್ಯಕ್ತಿ ಯಾರೇ ಆದರೂ ಕಾನೂನಿನ ಪ್ರಕಾರ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕನ್ನಡದ ನೆಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ನಿನ್ನೆ ನಡೆದಿರುವ ಪ್ರಕರಣ ಇದಕ್ಕೆ ತಾಜಾ ಉದಾಹರಣೆ. ರಸ್ತೆಯಲ್ಲಿ ಆದ ಗಲಾಟೆಯನ್ನು ಭಾಷಾ ಗಲಾಟೆಯೆಂದು ಬಿಂಬಿಸಿ ಸೇನೆಯ ಪ್ರಭಾವ ಬಳಸಿ ಕನ್ನಡಿಗರ ಮೇಲೆಯೇ ದೂರು ದಾಖಲಿಸಲಾಯಿತು. ಮಾತ್ರವಲ್ಲ, ಈ ಬಗ್ಗೆ ವಿಂಗ್ ಕಮ್ಯಾಂಡರ್ ಎಂದು ಹೇಳಿಕೊಂಡ ವ್ಯಕ್ತಿ ಸುಳ್ಳುಗಳನ್ನು ಹೇಳಿ ವಿಡಿಯೋ ಮಾಡಿ ಕನ್ನಡಿಗರನ್ನು ದುಷ್ಕರ್ಮಿಗಳು, ರೌಡಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡಲಾಯಿತು.
ನಿನ್ನೆ ಬೆಳಿಗ್ಗೆಯಿಂದಲೂ ಇಂಗ್ಲಿಷ್, ಹಿಂದಿ ಚಾನಲ್‌ಗಳು ಕನ್ನಡಿಗರ ಮೇಲೆ ಯುದ್ಧವನ್ನೇ ಸಾರಿದ್ದವು. ಕನ್ನಡಿಗರನ್ನು ಥಗ್ಸ್ ಎಂದು ಕರೆಯಲಾಯಿತು. ಕನ್ನಡಿಗರು ಗೂಂಡಾಗಳು, ಅಸಹಿಷ್ಣುಗಳು ಎಂದು ಬಿಂಬಿಸಲಾಯಿತು. ಕೊನೆಗೆ ವಿಂಗ್ ಕಮಾಂಡರ್ ಮಾಡಿದ ದೌರ್ಜನ್ಯದ ವಿಡಿಯೋಗಳು ಸಾಲುಸಾಲಾಗಿ ಹೊರಬಂದ ಮೇಲೆ ಎಲ್ಲವೂ ಬಾಯಿಮುಚ್ಚಿಕೊಂಡು ಕುಳಿತವು. ಈ ನಾಚಿಗೆಗೆಟ್ಟ ದೇಶದ್ರೋಹಿ ಮಾಧ್ಯಮಗಳಿಗೆ ಕನ್ನಡಿಗನ ಮೇಲೆ ನಡೆದ ಹಲ್ಲೆ ಕಣ್ಣಿಗೆ ಕಾಣಲೇ ಇಲ್ಲ. ಅದರ ಕುರಿತು ಕಾರ್ಯಕ್ರಮಗಳನ್ನು ಮಾಡಲೇ ಇಲ್ಲ.
ನಿನ್ನೆ ವಿಕಾಸ ಎಂಬ ಹುಡುಗನನ್ನು ಪೊಲೀಸರು ಬಂಧಿಸಿದಾಗಿನಿಂದಲೂ ಬ್ಯಾಟರಾಯನಪುರ ವ್ಯಾಪ್ತಿಯ ಕರವೇ ಪದಾದಿಕಾರಿಗಳು ಪೋಲೀಸ್ ಠಾಣೆಯಲ್ಲೇ ಇದ್ದು ಆ ಹುಡುಗನಿಗೆ ಸಹಕಾರ ನೀಡಿದ್ದಾರೆ. ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ಕರವೇ ಕಾರ್ಯಕರ್ತ ದೇವರಾಜ್ ರಾತ್ರಿ 2 ಗಂಟೆಯವರೆಗೆ ಅಲ್ಲೇ ಇದ್ದು, ವಿಂಗ್ ಕಮ್ಯಾಂಡರ್ ಮೇಲೆ FIR ಮಾಡುವಂತೆ ಹೋರಾಟ ಮಾಡಿದ್ದಾರೆ. ಬೆಳಿಗ್ಗೆ ನಮ್ಮ ರಾಜ್ಯ ಮಹಿಳಾ ಘಟಕದ ಗೌರವಾಧ್ಯಕ್ಷರಾದ ಅಶ್ವಿನಿ ಗೌಡ, ಪದ್ಮನಾಭನಗರ ಕ್ಷೇತ್ರ ಘಟಕದ ಅಧ್ಯಕ್ಷ ಮನುಗೌಡ ಮತ್ತು ಹಲವಾರು ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ, ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆ ಹುಡುಗನಿಗೆ ಬೇಕಾದ ಎಲ್ಲಾ ಕಾನೂನು ಸಹಕಾರವನ್ನೂ ಸಹ ಕರವೇ ನೀಡಲಿದೆ, ಬೀದಿ ಜಗಳವನ್ನು ಭಾಷಾ ಸಮಸ್ಯೆ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ತ್ಯ ಕದಡಲು ಯತ್ನಿಸಿರುವ ಕುರಿತು ಪೊಲೀಸರಿಗೆ ಮನವರಿಕೆ ಮಾಡಿಕೊಡಲಾಗಿದೆ .
ಕನ್ನಡದ ಯುವಕನ ಮೇಲೆ ಕನ್ನಡದ ನೆಲದಲ್ಲೇ ಹಲ್ಲೆ ನಡೆಸುವ ದುಸ್ಸಾಹಸಕ್ಕೆ ಮುಂದಾಗುವ ವ್ಯಕ್ತಿ ಯಾರೇ ಆದರೂ ಕಾನೂನಿನ ಪ್ರಕಾರ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ. ಈಗಾಗಲೇ ನಾನು ಇನ್ಸ್‌ಪೆಕ್ಟರ್ ಜೊತೆ ಮಾತಾಡಿದ್ದು, ಕನ್ನಡದ ಹುಡುಗನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
ಕನ್ನಡಿಗರ ಮೇಲೆ ಇದೆ ರೀತಿ ದೌರ್ಜನ್ಯಗಳು ನಡೆದರೆ, ಕನ್ನಡಿಗರನ್ನು ಗೂಂಡಾಗಳು ಎಂಬಂತೆ ಬಿಂಬಿಸಲು ಯಾರಾದರೂ ಯತ್ನಿಸಿದರೆ ನಾವು ಇನ್ನೂ ಮುಂದೆ ಸುಮ್ಮನೆ ಇರುವುದಿಲ್ಲ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ ಎಂದಿದ್ದಾರೆ.