ಐಪಿಎಸ್ ಅಧಿಕಾರಿಗೆ ವಿಚಾರಣೆಗಾಗಿ ಬುಲಾವ್

0
18

ಬೆಂಗಳೂರು: ಬಹುಕೋಟಿ ಬಿಟ್‌ಕಾಯಿನ್ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಐಪಿಎಸ್ ಶ್ರೇಣಿಯ ಅಧಿಕಾರಿಯೊಬ್ಬರನ್ನು ಸಿಐಡಿಯ ವಿಶೇಷ ತನಿಖಾ ದಳ (ಸಿಐಡಿ) ವಿಚಾರಣೆಗೆ ಬುಲಾವ್ ನೀಡಿದ್ದು, ಬುಧವಾರ ಬೆಳಗ್ಗೆ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವ ನಿರೀಕ್ಷೆ ಇದೆ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಬಿಟ್‌ಕಾಯಿನ್ ತನಿಖೆಗೆ ತಾಂತ್ರಿಕ ನೆರವು ನೀಡಿದ ಖಾಸಗಿ ಐಟಿ ಕಂಪನಿಯ ಸಿಇಓ ಸಂತೋಷ್ ಕುಮಾರ್ ಎಂಬುವವರನ್ನು ಬಂಧಿಸಿರುವ ಎಸ್‌ಐಟಿ, ಇಡೀ ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಹೇಳಿಕೆಯನ್ನೂ ಸಿಆರ್‌ಸಿಪಿ ಸೆಕ್ಷನ್ ೧೬೪ ಅಡಿಯಲ್ಲಿ ದಾಖಲು ಮಾಡಿದೆ. ಈ ಬೆಳವಣಿಗೆ ಆಧರಿಸಿಯೇ ಐಪಿಎಸ್ ಅಧಿಕಾರಿಗೂ ತನಿಖಾ ದಳವು ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ. ಆದರೆ ಸಿಐಡಿ ಮೂಲಗಳು ನೋಟಿಸ್ ನೀಡಿರುವ ಅಧಿಕಾರಿಯ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದೆ.
ಬಿಟ್‌ಕಾಯಿನ್ ಹ್ಯಾಕ್ ಮಾಡುವಲ್ಲಿ ನಿಷ್ಣಾತನಾಗಿದ್ದ ಶ್ರೀಕಿ ಬಳಸಿಕೊಂಡು ಹಲವು ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಕೆಲವು ಗುತ್ತಿಗೆದಾರರು ೧ ಸಾವಿರಕ್ಕೂ ಅಧಿಕ ಬಿಟ್‌ಕಾಯಿನ್‌ಗಳನ್ನು ಕ್ರಿಪ್ಟೊ ಮಾರುಕಟ್ಟೆಯಿಂದ ಲಪಟಾಯಿಸಿದ್ದು, ಸರಿಸುಮಾರು ೪೮೦ ಕೋಟಿ ರೂ.ಗಳನ್ನು ಕೆಲವೇ ಕೆಲವು ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರ ಖಾತೆಗಳಿಗೆ ರಾಬಿನ್ ಖಂಡೇಲವಾಲ್ ಎಂಬ ಶ್ರೀಕಿಯ ಅಕೌಂಟೆಂಟ್ ಮುಖಾಂತರ ವಹಿವಾಟು ನಡೆಸಲಾಗಿದೆ ಎಂಬ ವಿಷಯ ಎಸ್‌ಐಟಿ ತನಿಖೆ ವೇಳೆ ಗೊತ್ತಾಗಿದೆ ಎಂದು ಹೇಳಲಾಗಿದೆ.
ರಾಬಿನ್ ಖಂಡೇಲ್‌ವಾಲ ಎಂಬಾತನನ್ನೂ ವಿಚಾರಣೆಗೆ ಒಳಪಡಿಸಿರುವ ವಿಶೇಷ ತನಿಖಾ ದಳದ ಪೊಲೀಸರು ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಭಾವಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಬಿಟ್‌ಕಾಯಿನ್ ಹ್ಯಾಕ್ ಮಾಡಿಸಿಕೊಂಡ ಬಗೆಗೆ ಎಸ್‌ಐಟಿ ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಿದೆ.
ಈ ಮಧ್ಯೆ ಹಿಂದಿನ ಬಿಜೆಪಿ ಸರಕಾರದಲ್ಲಿ ಬಿಟ್‌ಕಾಯಿನ್ ಹಗರಣ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಾದ ಶ್ರೀಧರ್ ಪೂಜಾರ್, ಎಸ್.ಆರ್.ಚಂದ್ರಶೇಖರ್ ಮತ್ತು ಲಕ್ಷಿö್ಮಕಾಂತಯ್ಯ ಅವರಿಗೂ ತನಿಖಾ ದಳ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಒಳಪಡಿಸಿದೆ.
ಯುನೊ ಕಾಯಿನ್ ಎಂಬ ಕ್ರಿಪ್ಟೊ ವಹಿವಾಟಿನ ಕಂಪನಿಯ ಬಿಟ್‌ಕಾಯಿನ್‌ಗಳನ್ನೇ ಶ್ರೀಕಿ ಹ್ಯಾಕ್ ಮಾಡಿರುವ ಹಿನ್ನೆಲೆಯಲ್ಲಿ ಆ ಕಂಪನಿಯ ಕೆಲವು ಅಧಿಕಾರಿಗಳನ್ನು ಕೂಡ ತನಿಖಾ ದಳ ವಿಚಾರಣೆ ನಡೆಸಲು ಮುಂದಾಗಿತ್ತು. ಈ ಕಂಪನಿಯ ಅಧಿಕಾರಿಗಳಿಗೂ ಹಾಗೂ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಬಾಂಧವ್ಯ ಇದೆ ಎಂಬ ಆರೋಪ ಇರುವುದರಿಂದ ಅಧಿಕಾರಿಗಳು ಬಂಧನದ ಭೀತಿ ಎದುರಿಸುತ್ತಿದ್ದರು ಎನ್ನಲಾಗಿತ್ತು. ಹೀಗಾಗಿ ಈ ಅಧಿಕಾರಿಗಳು ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
ಈ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯದ ಎದುರು ಹೇಳಿಕೆ ನೀಡಿರುವ ಎಸ್‌ಐಟಿ ಪರ ವಕೀಲರು, “ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಹಗರಣದ ಪ್ರಮುಖ ಆರೋಪಿ ಶ್ರೀಕಿ ಲ್ಯಾಪ್‌ಟಾಪ್ ಬಳಸುತ್ತಿದ್ದ ಫೋಟೊವೊಂದು ಲಭ್ಯವಾಗಿದ್ದು, ಆ ಲ್ಯಾಪ್‌ಟಾಪ್ ಎಲ್ಲಿದೆ ಎಂಬುದನ್ನು ಎಸ್‌ಐಟಿ ಹುಡುಕುತ್ತಿದೆ. ಈವರೆಗೆ ಪೊಲೀಸರು ನಡೆಸಿದ ತನಿಖೆ ವೇಳೆ ಈ ಲ್ಯಾಪ್‌ಟಾಪ್ ಜಪ್ತಿ ಮಾಡಿರುವ ಬಗೆಗೆ ಯಾವುದೇ ದಾಖಲೆ ಇಲ್ಲ. ಶ್ರೀಕಿ ಬಳಸುತ್ತಿದ್ದ ಲ್ಯಾಪ್‌ಟಾಪ್ ಪತ್ತೆಯಾದರೆ ಮಹತ್ವದ ಮಾಹಿತಿ ದೊರಕುವ ವಿಶ್ವಾಸವಿದೆ” ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಐಪಿಎಸ್ ಅಧಿಕಾರಿಗೆ ನೋಟಿಸ್ ನೀಡಿರುವ ವಿಚಾರ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

Previous articleಚಂಡೀಗಢ ಆಪ್ ಅಭ್ಯರ್ಥಿ ಮೇಯರ್: ಸುಪ್ರೀಂ ತೀರ್ಪು
Next articleನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅಧಿಕಾರ ಸ್ವೀಕಾರ