ಐಐಟಿ ಬಾಬಾ ಭವಿಷ್ಯಕ್ಕೆ ಸೋಲು

ಭಾರತ ಗೆದ್ದ ಬಳಿಕ ಟ್ರೋಲ್‌ ಆದ ಐಐಟಿ ಬಾಬಾ

ಬೆಂಗಳೂರು: ಐಐಟಿ ಬಾಬಾ ಎಂದೇ ಖ್ಯಾತಿ ಹೊಂದಿರುವ ಅಭಯ್ ಸಿಂಗ್ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾರತ ತಂಡವನ್ನು ಸೋಲಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಈ ಐಐಟಿ ಬಾಬಾರ ಭವಿಷ್ಯ ಸುಳ್ಳಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಈ ಐಐಟಿ ಬಾಬಾನನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಅರು ವಿಕೆಟ್‌ಗಳಿಂದ ಟೀಂ ಇಂಡಿಯಾ ಬಗ್ಗುಬಡಿಯುವುದರ ಜತೆಗೆ ಐಐಟಿ ಬಾಬಾ ಭವಿಷ್ಯವನ್ನು ಸುಳ್ಳು ಮಾಡಿದೆ. ಅಭಯ್ ಸಿಂಗ್ ಅಥವಾ ಈ ಐಐಟಿ ಬಾಬಾ, ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಪಂದ್ಯದ ಕುರಿತಂತೆ ತುಂಬಾ ಆತ್ಮವಿಶ್ವಾಸದಿಂದಲೇ ಭವಿಷ್ಯ ನುಡಿದಿದ್ದರು. ‘ಭಾರತ ತಂಡವು ಪಾಕಿಸ್ತಾನ ಎದುರು ಹೀನಾಯ ಸೋಲು ಅನುಭವಿಸಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡಾ ವೈಫಲ್ಯ ಅನುಭವಿಸಲಿದ್ದಾರೆ’ ಎಂದು ಐಐಟಿ ಬಾಬಾ ಭವಿಷ್ಯ ನುಡಿದಿದ್ದರು.

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಕುಂಭಮೇಳದಲ್ಲಿ ಅಚ್ಚರಿಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದ ಸನ್ಯಾಸಿಯೇ ಐಐಟಿ ಬಾಬಾ. ಅವರ ನಿಜನಾಮಧೇಯ ಅಭಯ್ ಸಿಂಗ್. ಅವರು ಬಾಂಬೆ ಐಐಟಿ ಪದವೀಧರ ಎಂಬುದಾಗಿ ತಿಳಿಸಿದ್ದರು. ಮಾತ್ರವಲ್ಲದೇ ಕೆನಡಾದಲ್ಲಿ ದೊಡ್ಡ ವೇತನ ಪಡೆಯತ್ತಿದ್ದರು. ಆದರೆ ಆಧ್ಯಾತ್ಮಿಕ ಸಾಧನೆಗಾಗಿ ಅವರು ಹೈ ಪ್ರೊಫೈಲ್ ಜಾಬ್ ಅನ್ನು ತೊರೆದು ಬಂದುದಾಗಿ ಹೇಳಿದ್ದರು. ಇದರಿಂದಾಗಿ ಅವರು ಭಾರತಾದ್ಯಂತ ಹೆಸರುವಾಸಿಯಾಗಿದ್ದರು. ಅವರು ಮಾತನಾಡುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಈತ್ತೀಚೆಗೆ ಜುನಾ ಅಖಾಡದಲ್ಲಿದ್ದ ಅವರನ್ನು ದುರ್ನಡೆಯ ಆಧಾರದಲ್ಲಿ ಹೊರಹಾಕಲಾಗಿತ್ತು. ಆ ಬಳಿಕ ಅವರು ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದರು.