ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ವೇಳಾಪಟ್ಟಿ ಅಂತಿಮ

0
9

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಾರ್ಚ್ ೧ ರಿಂದ ಮಾ.೨೨ರವರೆಗೆ ದ್ವಿತೀಯ ಪಿಯುಸಿ ಹಾಗೂ ಮಾ.೨೫ ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ೬,೯೮,೬೨೪ ವಿದ್ಯಾರ್ಥಿಗಳು ಪಿಯುಸಿ, ೮,೯೬,೨೭೧ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ಸಿದ್ಧತೆ ಕುರಿತು ವಿವರಣೆ ನೀಡಿದ ಅವರು, ಎರಡು ಪರೀಕ್ಷೆಗಳನ್ನು ಸೂಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಎಸ್.ಪಿ. ಮೊದಲಾದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಗಿದೆ ಎಂದರು.
ದ್ವಿತೀಯ ಪಿಯುಸಿಗೆ ಸಂಬಂಧಿಸಿದಂತೆ ೩,೬೭,೯೮೦ ವಿದ್ಯಾರ್ಥಿನಿಯರು, ೩,೩೦,೬೪೪ ವಿದ್ಯಾರ್ಥಿಗಳು ಒಟ್ಟು ೬,೯೮,೬೨೪ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದು, ರಾಜ್ಯದಾದ್ಯಂತ ೧೧೨೪ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಸ್‌ಎಸ್‌ಎಲ್‌ಸಿಗೆ ಸಂಬಂಧಿಸಿದಂತೆ ೪,೩೭,೮೪೪ ವಿದ್ಯಾರ್ಥಿನಿಯರು, ೪,೫೮,೪೨೭ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೮,೯೬,೨೭೧ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ೨೭೪೭ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ನಕಲು ಮುಕ್ತ ಪರೀಕ್ಷೆಗೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಅನೇಕ ಕ್ರಮ ವಹಿಸಲಾಗಿದೆ.
ಡ್ರೋನ್ ಕ್ಯಾಮೆರಾ ಅಳವಡಿಸುವ ಕೆಟ್ಟ ಪರಂಪರೆಗೆ ನಾವು ಮುಂದಾಗಿಲ್ಲ, ಭಯದಲ್ಲಿ ಪರೀಕ್ಷೆ ಬರೆಯದೇ ಉತ್ಸಾಹದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು, ಪರೀಕ್ಷೆಯ ಬಗ್ಗೆ ಯಾವ ಭಯವೂ ಬೇಡ ಎಂದು ಶಿಕ್ಷಣ ಸಚಿವರು ವಿದ್ಯಾರ್ಥಿಗಳಿಗೆ ಅಭಯ ತುಂಬಿದರು.
ಉಭಯ ವಿದ್ಯಾರ್ಥಿಗಳಿಗೂ ಪರೀಕ್ಷೆಯ ಬಗ್ಗೆ ಇರುವ ಗೊಂದಲ ನಿವಾರಣೆಗೆ ಸಂಬಂಧಿಸಿದಂತೆ ಅನೇಕ ಮಾಹಿತಿ ಹಾಗೂ ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳನ್ನು ಸಿದ್ಧಪಡಿಸಿ ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ವಿವರಿಸಿದರು.

Previous articleವಿರುಷ್ಕಾ ಜೋಡಿಗೆ ಗಂಡು ಮಗು
Next articleಪ್ರಧಾನಿ ಮೋದಿಯವರಿಗೆ 370 ಸ್ಥಾನ ಗಿಫ್ಟ್ ನೀಡಿ