ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿ ಯುವತಿಯೋರ್ವಳು ಸಾವನ್ನಪ್ಪಿರುವ ಘಟನೆ ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಗ್ರೀನ್ ಸಿಟಿ ಮೋಟಾರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯಲ್ಲಿ ನಡೆದಿದೆ.
ಸಂಜೆ 5.30ರ ಸುಮಾರಿಗೆ ಈ ಅಗ್ನಿ ಅವಘಡ ನಡೆದಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಶೋ ರೂಂ ಸಂಪೂರ್ಣವಾಗಿ ಸುಟ್ಟು ಹೋಗಿದೆ.
ಬೆಂಕಿ ಬಿದ್ದ ಕೂಡಲೇ ಮೃತ ಪ್ರಿಯಾ(20) ಕ್ಯಾಶಿಯರ್ ರೂಂನ ಒಳಗೆ ಹೋಗಿ ಡೋರ್ ಲಾಕ್ ಮಾಡಿಕೊಂಡಿದ್ದಾರೆ. ನಂತರ ಹೆಚ್ಚಿನ ಹೊಗೆ ಹಾಗೂ ಬೆಂಕಿಯ ತೀವ್ರತೆಯಿಂದ ಯುವತಿ ಅದೇ ರೂಂನಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಸ್ಥಳೀಯರು ಅಗ್ನಿಶಾಮಕದ ದಳದ ಸಿಬ್ಬಂದಿಗೆ ಕರೆ ಮಾಡಿದ್ದು, ಅಷ್ಟರಲ್ಲಿಯೇ ಪ್ರಿಯಾ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಆಕೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.