ರಾಜ್ಯದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಕೊರತೆ ಇಲ್ಲ. ಸರ್ಕಾರಿ ಮತ್ತು ಖಾಸಗಿ ಸೇರಿ ೬೩೦ ಇಂಜಿನಿಯರಿಂಗ್ ಕಾಲೇಜು ಇಡೀ ರಾಜ್ಯದಲ್ಲಿ ಹರಡಿಕೊಂಡಿದೆ. ಅದರಲ್ಲಿ ಅತಿ ಹೆಚ್ಚು ಕಾಲೇಜು ಬೆಂಗಳೂರು ಸುತ್ತಮುತ್ತಲೇ ಇವೆ. ಸರ್ಕಾರಕ್ಕೆ ಸೇರಿದ ೧೬ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ತೀವ್ರವಾಗಿದೆ. ಒಟ್ಟು ೬೪೬ ಹುದ್ದೆಗಳಲ್ಲಿ ೩೦೭ ಖಾಲಿ ಇದೆ ಎಂದ ಮೇಲೆ ಮಕ್ಕಳ ಪಾಡೇನು? ಕಾಲೇಜುಗಳನ್ನು ತೆರೆಯುವುದು ಸುಲಭ. ಕಟ್ಟಡ ಒದಗಿಸಬಹುದು. ಆದರೆ ನುರಿತ ಶಿಕ್ಷಕರನ್ನು ಕರೆತರುವುದು ಕಷ್ಟ. ಏಕೆಂದರೆ ಶಿಕ್ಷಕ ವರ್ಗ ಒಂದು ವರ್ಷದಲ್ಲಿ ತಯಾರಾಗುವುದಿಲ್ಲ. ಅದರಲ್ಲೂ ಪಾಠ ಮಾಡುವವರು ಕನಿಷ್ಠ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪಡೆದವರು ಐಐಟಿಗಳಲ್ಲಿ ಶಿಕ್ಷಕರಾಗಲು ಬಯಸುತ್ತಾರೆಯೇ ಹೊರತು ಸರ್ಕಾರಿ ಕಾಲೇಜುಗಳಲ್ಲಿ ಪಾಠ ಮಾಡಲು ಬರುವುದಿಲ್ಲ.
ಐಟಿಬಿಟಿ ಕಂಪನಿಗಳು ಬೆಂಗಳೂರು ಸುತ್ತ ತಲೆಎತ್ತಿದ ಮೇಲೆ ಇಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಅಧಿಕಗೊಂಡಿತು. ಅದರಿಂದ ಎಲ್ಲ ಕಡೆ ಇಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತಿದವು. ಖಾಸಗಿ ಕಾಲೇಜುಗಳೇ ೪೬೨ ಇವೆ. ಅಲ್ಲದೆ ಖಾಸಗಿ ವಿವಿಗಳು, ಸ್ವಾಯತ್ತ ಕಾಲೇಜುಗಳು ತಲೆ ಎತ್ತಿವೆ. ಇದಕ್ಕೆ ಪ್ರಮುಖ ಕಾರಣ ಬೆಂಗಳೂರು ಸುತ್ತಮುತ್ತ ೧೦೦ ಪ್ರತಿಷ್ಠಿತ ಐಟಿಬಿಟಿ ಕಂಪನಿಗಳು ಕೆಲಸ ಮಾಡುತ್ತಿವೆ. ಇವುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ-ವ್ಯವಹಾರಗಳನ್ನು ಹೊಂದಿವೆ. ಇವುಗಳಿಗೆ ತರಬೇತಿ ಪಡೆದ ಇಂಜಿನಿಯರ್‌ಗಳ ಅಗತ್ಯವಿದೆ. ಈಗ ಸಿವಿಲ್, ಮೆಕಾನಿಕಲ್ ವಿಷಯಗಳಿಗೆ ಬೇಡಿಕೆ ಇಲ್ಲ. ಎಲ್ಲರೂ ಈಗ ಎ.ಐ, ಸೈಬರ್ ಸೆಕ್ಯೂರಿಟಿ ವಿಷಯಗಳನ್ನು ಅಧ್ಯಯನ ಮಾಡಲು ಬಯಸುತ್ತಾರೆ. ಕೇವಲ ಇಂಜಿನಿಯರಿಂಗ್ ಪದವಿ ಉಪಯೋಗಕ್ಕೆ ಬರುವುದಿಲ್ಲ. ಬೆಂಗಳೂರಿನಲ್ಲಿ ಬೇರೆ ವಿಷಯಗಳನ್ನು ಅಧ್ಯಯನ ಮಾಡಲು ಅನುಕೂಲಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವಿಶೇಷ ತರಬೇತಿ ನೀಡುತ್ತಿವೆ. ಈ ರೀತಿ ತಂತ್ರಜ್ಞಾನದಲ್ಲಿ ಮುಂದಿರುವ ಇಂಜಿನಿಯರ್‌ಗಳ ಜತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರು ನಗರ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿರುವ ಕಾಲೇಜುಗಳ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವುದು ಕಷ್ಟ. ಸುರತ್ಕಲ್ ರೀಜಿನಲ್ ಇಂಜಿನಿಯರಿಂಗ್ ಕಾಲೇಜನ್ನು ಹೊರತುಪಡಿಸಿದರೆ ಉಳಿದ ಕಾಲೇಜುಗಳಲ್ಲಿ ಶಿಕ್ಷಣಮಟ್ಟ ಉತ್ತಮಪಡಿಸುವ ಕೆಲಸ ನಡೆದೇ ಇಲ್ಲ. ಉತ್ತಮ ಶಿಕ್ಷಣ ಮಟ್ಟ ಕಾಯ್ದುಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಹಿಂದೆ ಸರ್ಕಾರಿ ಮಟ್ಟದಲ್ಲಿ ಶಿಕ್ಷಣಮಟ್ಟ ಕಾಯ್ದುಕೊಳ್ಳಲು ಹಲವು ಕ್ರಮಕೈಗೊಳ್ಳಲಾಗಿತ್ತು. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಬಂದ ಇಂಜಿನಿಯರ್‌ಗಳು ದೇಶಾದ್ಯಂತ ವಿವಿಧ ಪ್ರತಿಷ್ಠಿತ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಈಗ ಖಾಸಗಿ ಕಾಲೇಜುಗಳು ಶಿಕ್ಷಣ ಮಟ್ಟ ಕಾಯ್ದುಕೊಂಡು ಹೋಗುವುದರಲ್ಲಿ ಮುಂಚೂಣಿಯಲ್ಲಿವೆ. ಅದರಿಂದ ವಂತಿಗೆ ಶುಲ್ಕ ಪ್ರತಿ ವರ್ಷ ಅಧಿಕಗೊಳ್ಳುತ್ತ ಹೋಗುತ್ತಿದೆ. ಸಿಇಟಿಯಲ್ಲಿ ಒಟ್ಟು ೧,೩೨,೩೦೯ ಇಂಜಿನಿಯರಿಂಗ್ ಸೀಟುಗಳಿವೆ. ಅಲ್ಲದೆ ಖಾಸಗಿ ಕಾಲೇಜುಗಳು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುತ್ತಿವೆ. ಹಿಂದಿನಿಂದಲೂ ಸಿಇಟಿ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದ್ದೇ ಇದೆ. ಐಟಿಬಿಟಿ ಕ್ಷೇತ್ರದಲ್ಲಿ ಬೆಂಗಳೂರಿನಲ್ಲೇ ೫೦ ಲಕ್ಷ ಜನ ಉದ್ಯೋಗ ಪಡೆದಿದ್ದಾರೆ. ಈಗಲೂ ಐಟಿಬಿಟಿಯಲ್ಲಿ ಪ್ರತಿಭಾವಂತರಿಗೆ ಉತ್ತಮ ಬೇಡಿಕೆ ಅಧಿಕಗೊಳ್ಳುತ್ತಿದೆ. ಅದರಿಂದ ಸರ್ಕಾರ ತನ್ನ ಸ್ವಾಧೀನದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಶಿಕ್ಷಣ ಮಟ್ಟ ಉತ್ತಮಪಡಿಸಬೇಕು. ಉತ್ತಮ ಶಿಕ್ಷಕರ ಕೊರತೆ ಏನೂ ಇಲ್ಲ. ಸರ್ಕಾರ ಆಕರ್ಷಕ ವೇತನಕೊಟ್ಟು ಉತ್ತಮರನ್ನು ಆಯ್ಕೆ ಮಾಡುವ ಕ್ರಮ ಕೈಗೊಳ್ಳಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕೇ ಹೊರತು ಮತ್ತೇನೂ ಅಲ್ಲ. ಉನ್ನತ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಕೊಟ್ಟಿರುವುದು ೨೫೦೦ ಕೋಟಿ ರೂ. ಅದರಲ್ಲಿ ವಿಶ್ವ ಬ್ಯಾಂಕ್ ನೆರವು ೧೭೫೦ ಕೋಟಿ ರೂ. ಈ ಹಣ ಹೇಗೆ ಬಳಕೆಯಾಗುತ್ತದೆ ಎಂಬುದು ಮುಖ್ಯ.
ಐಟಿ ಬಿಟಿ ಕಂಪನಿಗಳು ಇಂಜಿನಿಯರಿಂಗ್ ಪದವಿಗೆ ಬೆಲೆ ಕೊಡುವುದಿಲ್ಲ. ಪ್ರತಿ ಅಭ್ಯರ್ಥಿಯ ಜ್ಞಾನ ಮಟ್ಟವನ್ನು ಅಳೆಯುತ್ತಾರೆ. ಹೀಗಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಇತರರೊಂದಿಗೆ ಸ್ಪರ್ಧಿಸುವುದು ಕಷ್ಟ. ಹೆಸರಿಗೆ ಇಂಜಿನಿಯರಿಂಗ್ ಪದವಿ ಪಡೆದಿರುತ್ತಾರೆ. ಆದರೆ ಅದು ಉಪಯೋಗಕ್ಕೆ ಬರುವುದಿಲ್ಲ. ತಂತ್ರಜ್ಞಾನದಲ್ಲಿ ಪ್ರತಿದಿನ ಬೇಕಾದಷ್ಟು ಬೆಳವಣಿಗೆ ಆಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ಶಿಕ್ಷಕರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಅದರಲ್ಲೂ ಕಂಪ್ಯೂಟರೀಕರಣ ಮತ್ತು ಇಂಟರ್‌ನೆಟ್ ಸಂಪರ್ಕ ಬಂದ ಮೇಲೆ ಶಿಕ್ಷಣದ ರಂಗದಲ್ಲಿ ಮಹತ್ತರ ಬದಲಾವಣೆಗಳು ಬರುತ್ತಿವೆ. ಇವುಗಳ ವೇಗಕ್ಕೆ ತಕ್ಕಂತೆ ನಮ್ಮ ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರ ಸ್ಪಂದಿಸಬೇಕಿದೆ. ಅದಕ್ಕೆ ತಕ್ಕಂತೆ ಯುವ ಪೀಳಿಗೆಯ ಶಿಕ್ಷಕರನ್ನು ಕಂಡುಕೊಳ್ಳುವುದು ಅಗತ್ಯ. ಇಂಜಿನಿಯರಿಂಗ್ ಕಾಲೇಜು ಮತ್ತು ಉದ್ಯಮ ಕ್ಷೇತ್ರದ ನಡುವೆ ಉತ್ತಮ ಬಾಂದವ್ಯ ಬೆಳೆಸುವುದು ಇಂದಿನ ಅಗತ್ಯ. ಎಷ್ಟೋ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉದ್ಯೋಗ ನೀಡುವ ಕಂಪನಿಗಳು ಕ್ಯಾಂಪಸ್ ಇಂಟರ್‌ವ್ಯೂ ನಡೆಸುತ್ತಿಲ್ಲ. ಇದರಿಂದ ಅಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರಕುವುದು ಕಷ್ಟ.