ಬಾಗಲಕೋಟೆ(ಬಾದಾಮಿ): ಐತಿಹಾಸಿಕ ಬಾದಾಮಿ ನಗರದ ಅಗಸ್ತ್ಯತೀರ್ಥ ಹೊಂಡ ಮತ್ತು ಮೇಣಬಸದಿಯ ಮಧ್ಯದ ಜಾಗೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಕೈಗೊಂಡಿರುವ ಉತ್ಖನನದಲ್ಲಿ ಮತ್ತೆ 10 ತಾಮ್ರದ ನಾಣ್ಯಗಳು ದೊರಕಿವೆ.
ಮೇಣಬಸದಿಯ ನಾಲ್ಕನೆಯ ಗುಹೆ ಜೈನ ಬಸದಿಯ ಕೆಳ ಭಾಗದಲ್ಲಿ ನಡೆದಿರುವ ಉತ್ಖನನದಲ್ಲಿ ಈ ಮೊದಲು ಮಡಿಕೆ, ನಾಣ್ಯ, ಅಸ್ತಿ (ಮೂಳೆ) ದೊರಕಿದ್ದವು, ಇದೀಗ ಮತ್ತೆ ಇದೇ ಜಾಗೆಯಲ್ಲಿ 10 ನಾಣ್ಯಗಳು ದೊರೆತಿದ್ದರ ಹಿನ್ನೆಲೆಯಲ್ಲಿ ಶೋಧನೆಗೆ ಮತ್ತಷ್ಟು ಪುಷ್ಪಿ ನೀಡಿದೆ.
ಇವುಗಳ ಜೊತೆಗೆ ಪ್ರಮುಖವಾಗಿ ಬಂಡೆಗಲ್ಲಿನ ಮೆಟ್ಟಿಲುಗಳು ಮತ್ತು ಬಿಡಿಗಲ್ಲಿನ ಮೆಟ್ಟಿಲುಗಳು ದೊರಕಿದ್ದವು. ಈ ಮೆಟ್ಟಿಲುಗಳು ಅಗಸ್ತ್ಯತೀರ್ಥ ತಟದಿಂದ ಜೈನ ಬಸದಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿತ್ತು ಎಂಬುದನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೀಗ ದೊರೆತಿರುವ ನಾಣ್ಯಗಳನ್ನು ಕೆಮಿಕಲ್ ಲ್ಯಾಬಿಗೆ ಕಳಿಸುವ ಮೂಲಕ ನಾಣ್ಯಗಳ ಚಲಾವಣೆಯ ಕಾಲಘಟ್ಟ ತಿಳಿಯಲು ಸಾಧ್ಯವಾಗುತ್ತದೆ. ಹೀಗಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂಬ ಮಾತನ್ನು ಧಾರವಾಡ ವಲಯ ಪುರಾತತ್ವ ಇಲಾಖೆಯ ಮುಖ್ಯ ಅಧೀಕ್ಷಕ ರಮೇಶ ಮೂಲಿಮನಿ ತಿಳಿಸಿದ್ದಾರೆ.
ನಾಣ್ಯಗಳು ಅಂದಾಜು 4 ರಿಂದ 5 ಸೆಂ.ಮೀನಷ್ಟು ಉದ್ದಳತೆಯಲ್ಲಿವೆ. ಅವುಗಳು ಮಣ್ಣಲ್ಲಿ ಹುದುಗಿಕೊಂಡಿದ್ದರಿಂದ ಅವುಗಳನ್ನು ಕೆಮಿಕಲ್ ಲ್ಯಾಬಿನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮಾತ್ರ ನಾಣ್ಯದ ಸಂಪೂರ್ಣ ಮಾಹಿತಿ ತಿಳಿದು ಬರಲಿದೆ ಎಂದು ಅವರು ಹೇಳಿದ್ದಾರೆ.