ಬಾಗಲಕೋಟೆ(ರಬಕವಿ-ಬನಹಟ್ಟಿ): ರಾಜ್ಯ ಸರ್ಕಾರ ಮಹತ್ತರ ಯೋಜನೆಯೊಂದನ್ನು ನೇಕಾರ ಸಮುದಾಯಕ್ಕೆ ಒದಗಿಸುವ ಮೂಲಕ ಕ್ರಾಂತಿ ನಿರ್ಮಿಸಿದೆ.
ಕಳೆದ 20 ವರ್ಷಳಿಂದ ಸಬ್ಸಿಡಿಯಾಗಿ ನೇಕಾರರಿಗೆ 1.25 ರೂ. ಪ್ರತಿ ಯುನಿಟ್‌ಗೆ ದರವಿತ್ತು. ಇದೀಗ ಕಳೆದ 2023, ಏಪ್ರಿಲ್ ತಿಂಗಳಿಂದ ಸಂಪರ‍್ಣ ಉಚಿತವಾಗಿ ವಿದ್ಯುತ್ ಒದಗಿಸುತ್ತಿದ್ದರೂ ಮಗ್ಗಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿರುವದು ಆತಂಕಕಾರಿಯಾಗಿದೆ.
2023ರ ರಾಜ್ಯ ಬಜೆಟ್‌ನಲ್ಲಿ ಪ್ರತಿ ನೇಕಾರರಿಗೆ 10 ಎಚ್‌ಪಿವರೆಗಿನ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡುವದಾಗಿ ಘೋಷಣೆ ಮಾಡುವದರೊಂದಿಗೆ ಅದೇ ರ‍್ಷ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿ ನೇಕಾರರಿಗೂ ಶೂನ್ಯವಾಗಿ ವಿದ್ಯುತ್ ಬಿಲ್ ಒದಗಿಸುವಲ್ಲಿ ವಿದ್ಯುತ್ ಇಲಾಖೆ ಯಶಸ್ವಿಯಾಗಿತ್ತು.
ಇದರ ಲಾಭವನ್ನು ರಾಜ್ಯದಲ್ಲಿಯೇ ಬಹುಸಂಖ್ಯಾತರಾಗಿರುವ ತಾಲೂಕಾ ಪ್ರದೇಶವಾಗಿರುವ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ನೇಕಾರರು ಲಾಭ ಪಡೆಯುವಲ್ಲಿಯೂ ಕಾರಣವಾಗಿದೆ.
ಇತ್ತೀಚಿನ ವರ್ಷಗಳಿಂದ ಹೊಸ ನೈಪುಣ್ಯತೆ, ವಿನ್ಯಾಸ ಹಾಗು ಮಾರುಕಟ್ಟೆಯ ಸಮಸ್ಯೆಯಿಂದಾಗಿ ಕ್ರಮೇಣ ವಿದ್ಯುತ್ ಮಗ್ಗಗಳು ಗುಜರಿಗೆ ಸೇರುವಲ್ಲಿ ಕಾರಣವಾಗುತ್ತಿದ್ದು, ನೇಕಾರರು ಅನ್ಯ ಉದ್ಯೋಗದತ್ತ ವಾಲುವಲ್ಲಿ ಕಾರಣವಾಗಿದೆ.
ಹಾನಿ
ಉಚಿತ ವಿದ್ಯುತ್‌ನೊಂದಿಗೆ ಸೀರೆ ನೇಯ್ಗೆ ಮಾಡುತ್ತಿದ್ದರೂ ಹಾನಿ ಅನುಭವಿಸುವಲ್ಲಿ ನೇಕಾರರು ಇಂದಿಗೂ ಕಾರಣರಾಗಿದ್ದಾರೆ. ಸೂರತ್, ಚಿರಾಲಾ, ನಾಗ್ಪೂರ್ ಹಾಗು ಗುಜರಾತ್ ರಾಜ್ಯಗಳಲ್ಲಿನ ಕೆಲ ಪ್ರದೇಶದಿಂದ ಸೀರೆಗಳು ದೇಶಾದ್ಯಂತ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟು, ಅತ್ಯಂತ ಕಡಿಮೆ ದರದಲ್ಲಿ ಆರ‍್ಷಣೀಯವಾಗಿ ನೀರೆಯರ ಗಮನ ಸೆಳೆಯುವಲ್ಲಿ ಕಾರಣವಾಗಿದ್ದು, ತಂತ್ರಜ್ಞಾನ ಕೊರತೆಯೊಂದಿಗೆ ಮಜೂರಿ ಹೆಚ್ಚಳದಿಂದಾಗಿ ಉತ್ಪಾದನೆಗೊಂಡ ಸೀರೆಯ ದರ ಮಾರುಕಟ್ಟೆಯಲ್ಲಿ ದುಪ್ಪಟ್ಟಿನ ದರಕ್ಕೆ ದೊರಕಲು ಕಾರಣವಾಗುತ್ತಿದೆ.
ದಿನಕ್ಕೆ 4-5 ಮಗ್ಗಗಳು ಮಾಯ..!
ಈ ಭಾಗದಲ್ಲಿ ಕೈಮಗ್ಗದ ನಂತರ ಕ್ರಾಂತಿ ಮಾಡಿದ್ದ ವಿದ್ಯುತ್ ಮಗ್ಗಗಳು 35 ಸಾವಿರಕ್ಕೂ ಅಧಿಕ ಮಗ್ಗಗಳಿದ್ದವು, ಇದೀಗ 7 ಸಾವಿರ ಗಡಿಯಲ್ಲಿವೆ. ವಿದ್ಯುತ್ ಸಬ್ಸಿಡಿಯಿದ್ದರೂ ಸಹಿತ ಮಗ್ಗಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ದಿನಕ್ಕೆ ಅಂದಾಜು 4 ರಿಂದ 5 ಮಗ್ಗಗಳು ಪಟ್ಟಣದಿಂದ ಕಡಿಮೆಯಾಗುತ್ತ ಗುಜರಿಗೆ ಸೇರುತ್ತಿರುವದು ನೇಕಾರಿಕೆಯ ತೀವ್ರ ಸಂಕಷ್ಟ ಹಾಗು ಹಾನಿಗೆ ಹಿಡಿದ ಕನ್ನಡಿಯಾಗಿದೆ.
ಸಾಮಗ್ರಿ ಬೆಲೆ ಗಗನಕ್ಕೆ
ಉತ್ಪಾದನೆಗೆ ಬೇಕಾಗುವ ಕಚ್ಚಾ ಸಾಮಗ್ರಿ ಸೇರಿದಂತೆ ಮಜೂರಿ ದರ ಸುಮಾರು 30 ರಿಂದ 35 ರಷ್ಟು ಹೆಚ್ಚಳಗೊಂಡಿದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಸೀರೆಗಳಿಗೆ ಬೆಲೆ ದೊರಕುತ್ತಿಲ್ಲ. ಇದರೊಂದಿಗೆ ಸರ್ಕಾರದ ಜಿಎಸ್‌ಟಿ ತೆರಿಗೆ ನೇಕಾರಿಕೆಗೆ ಹೊರೆಯಾಗುವಲ್ಲಿ ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಕೇಳೋರಿಲ್ಲ:
ಬನಹಟ್ಟಿ ಸೀರೆಗಳು ಮಹಾರಾಷ್ಟ್ರ ಸರ್ಕಾರ ತೆಲಂಗಾಣ ರಾಜ್ಯಗಳು ಜೀವಾಳವಾಗಿವೆ. ಐದಾರು ವರ್ಷಗಳಿಂದ ಈ ಮಾರುಕಟ್ಟೆಗಳೂ ಸಹಿತ ಕೈಕೊಟ್ಟಿದ್ದು, ನೇಯ್ದ ಸೀರೆಗಳೆಲ್ಲವೂ ಗೋದಾಮು ಸೇರುತ್ತಿವೆ. ಇದರಿಂದ ಬೇಸತ್ತ ನೇಕಾರ ಮಾಲಿಕರು ಮಗ್ಗಗಳನ್ನು ಕ್ರಮೇಣ ಕಡಿಮೆ ಮಾಡುವಲ್ಲಿಯೂ ಕಾರಣವಾಗಿದೆ.