ದಾವಣಗೆರೆ: ಈಜು ಬಾರದ ತನ್ನ ಸ್ನೇಹಿತನ ರಕ್ಷಿಸಲು ಹೋದ ಬಾಲಕನೋರ್ವ ತನ್ನ ಸ್ನೇಹಿತನ ಜೊತೆ ತಾನೂ ನೀರು ಪಾಲಾದ ಘಟನೆ ತಾಲ್ಲೂಕಿನ ಕುರ್ಕಿ ಗ್ರಾಮದ ಬಳಿ ಸಂಭವಿಸಿದೆ.
ದಾವಣಗೆರೆ ಗುರುಕುಲ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಕುರ್ಕಿ ಗ್ರಾಮದ ಪಾಂಡು(೧೬), ತುರ್ಚಘಟ್ಟ ಗ್ರಾಮದ ಯತೀಂದ್ರ(೧೬) ಮೃತ ದುರ್ದೈವಿಗಳು. ಇಬ್ಬರು ಭಾನುವಾರ ಶಾಲೆಗೆ ರಜೆ ಇದ್ದಿದ್ದರಿಂದ ಕಟಿಂಗ್ ಮಾಡಿಸಿಕೊಳ್ಳಲು ಕುರ್ಕಿ ಗ್ರಾಮಕ್ಕೆ ಬಂದಿದ್ದಾರೆ. ಕ್ಷೌರದ ಬಳಿಕ ಭದ್ರಾ ಕಾಲುವೆಯಲ್ಲಿ ಈಜಲು ಹೋಗಿದ್ದರು. ಪಾಂಡುಗೆ ಈಜು ಬರುತ್ತಿತ್ತು. ಯತೀಂದ್ರಗೆ ಈಜಲು ಬರುತ್ತಿರಲಿಲ್ಲ. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ನಂತರ ಯತೀಂದ್ರ ಜಿಗಿದಿದ್ದಾನೆ. ಈ ವೇಳೆ ಯತೀಂದ್ರ ಮುಳುಗಿ ಏಳುತ್ತಿದ್ದಾಗ ಪಾಂಡು ಅವನನ್ನು ರಕ್ಷಣೆ ಮಾಡಲು ಹೋಗಿ ಇಬ್ಬರೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಾಯಕೊಂಡ ಶಾಸಕ ಕೆ. ಎಸ್.ಬಸವಂತಪ್ಪ ಭೇಟಿ ನೀಡಿ, ಒಬ್ಬರ ಶವ ಹುಡುಕಿಸಿದ್ದಾರೆ. ಇನ್ನೊಬ್ಬನ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ.