ಅವರಿಗೆ ಸಂಸ್ಕೃತದ ವ್ಯಾಮೋಹ ವಿಪರೀತ ಇದ್ದಂತಿದೆ

0
25

ಬೆಂಗಳೂರು: ಹಿರಿಯ ಸಾಹಿತಿ ಭೈರಪ್ಪನವರು ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಬಿಡಲಿ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದಿರುವ ಎಸ್.ಎಲ್.ಭೈರಪ್ಪನವರು ಮತ್ತೆ ಕನ್ನಡದ ತಾಯಿ ಸಂಸ್ಕೃತ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. ಅವರಿಗೆ ಸಂಸ್ಕೃತದ ವ್ಯಾಮೋಹ ವಿಪರೀತ ಇದ್ದಂತಿದೆ. ಈ ಇಳಿವಯಸ್ಸಿನಲ್ಲೂ ಅವರ ಸಂಸ್ಕೃತದ ಕುರಿತಾದ ಮೋಹ, ಅಮ್ಮ – ಮಗಳು ಅನ್ನುವ ಹಳಹಳಿಕೆ ಬೇಸರ ಹುಟ್ಟಿಸುತ್ತದೆ.

ಕನ್ನಡದಲ್ಲಿ ಸಂಸ್ಕೃತ ನುಡಿಯ ಪದಗಳು ಇವೆ, ಹೇರಳವಾಗಿ ಇವೆ ಅನ್ನೋ ಮಾತನ್ನು ಯಾರೂ ಕೂಡ ಅಲ್ಲಗಳೆಯುತ್ತಿಲ್ಲ. ಪ್ರಶ್ನೆ ಇರುವುದು ಕನ್ನಡ ನುಡಿಯ ಹುಟ್ಟಿನ ಕುರಿತಾದದ್ದು. ಕನ್ನಡ ಮತ್ತು ಸಂಸ್ಕೃತ ಬೇರೆ ಬೇರೆ ನುಡಿ ಕುಟುಂಬದಿಂದ ಹುಟ್ಟಿವೆ, ಬೆಳೆದಿವೆ. ಇಲ್ಲಿ ಯಾರೂ ಅಮ್ಮನೂ ಅಲ್ಲ, ಅಪ್ಪನೂ ಅಲ್ಲ. ಕನ್ನಡ ಪ್ರೊಟೊ ದ್ರಾವಿಡಿಯನ್ ನುಡಿ ಕುಟುಂಬದಿಂದ ಹುಟ್ಟಿದ್ದರೆ, ಸಂಸ್ಕೃತ ಇಂಡೋ ಆರ್ಯನ್ ನುಡಿ ಕುಟುಂಬದಲ್ಲಿ ಹುಟ್ಟಿದೆ. ಎರಡರ ಹುಟ್ಟಿಗೂ ಯಾವ ಸಂಬಂಧವೂ ಇಲ್ಲ.

ಎಲ್ಲ ನುಡಿಗಳಂತೆ ಕನ್ನಡವೂ ಕೂಡ ಬೇರೆ ಬೇರೆ ನುಡಿಗಳ ಪದಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಪಡೆದು ಬೆಳೆದಿವೆ. ಕನ್ನಡದಲ್ಲಿ ಸಂಸ್ಕೃತ ಮಾತ್ರವಲ್ಲ, ಪರ್ಷಿಯನ್, ಉರ್ದು, ತಮಿಳು, ಇಂಗ್ಲಿಷ್ ಪದಗಳು ಕಾಲಕಾಲಕ್ಕೆ ಬಂದು ಸೇರಿವೆ. ಅಂದ ಮಾತ್ರಕ್ಕೆ ಕನ್ನಡಕ್ಕೆ ಇವೆಲ್ಲ ನುಡಿಗಳು ಅಮ್ಮಂದಿರು, ಅಪ್ಪಂದಿರು ಆಗೋದಿಲ್ಲ. ಇಷ್ಟು ಸಣ್ಣ ವಿಷಯ ಮಾನ್ಯ ಭೈರಪ್ಪನವರಿಗೆ ಗೊತ್ತಿಲ್ಲ ಎಂದೇನಲ್ಲ. ಸಂಸ್ಕೃತವನ್ನು ಎಲ್ಲ ಭಾರತೀಯ ನುಡಿಗಳ ತಾಯಿ ಎಂದು ಹೇಳುವ ಹಿನ್ನೆಲೆಯಲ್ಲಿ ಒಂದು ಸಾಂಸ್ಕೃತಿಕ ರಾಜಕಾರಣವಿದೆ. ಅದರ ಭಾಗವಾಗಿ ಅವರು ಹೀಗೆ ಬಡಬಡಿಸುತ್ತಿದ್ದಾರೆ.

ಸಂಸ್ಕೃತ, ಪ್ರಾಕೃತ ನುಡಿಗಳನ್ನು ಆಳವಾಗಿ ಅರಿತಿರುವ ಕನ್ನಡದ ಹೆಸರಾಂತ ನುಡಿ ತಜ್ಞರಾದ ಹಂಪನಾ ಇಂದಿನ ಸುದ್ದಿಪತ್ರಿಕೆಯೊಂದಕ್ಕೆ ಒಂದು ಲೇಖನ ಬರೆದಿದ್ದಾರೆ. ಭೈರಪ್ಪನವರು ಅದನ್ನು ಓದಿ ತಮ್ಮ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿಕೊಳ್ಳಲಿ ಎಂದು ವಿನಂತಿ ಮಾಡುವೆ.

ಹಾಗೆಯೇ ಭೈರಪ್ಪನವರು ಬಿಡುವಾದಾಗ ನಮ್ಮ ಹಳ್ಳಿಗಳಿಗೆ ಒಂದು ಪ್ರವಾಸ ಹೋಗಿ ಬರಲಿ. ನಮ್ಮ ಹಳ್ಳಿಗಾಡಿನ ಜನರ ಜೊತೆ ಮಾತಾಡಿ ಬರಲಿ. ಅವರ ಮಾತುಗಳಲ್ಲಿ ಭೈರಪ್ಪ ನವರು ಹೇಳುವಂತೆ ಶೇ.60 ರಷ್ಟು ಬೇಡ ಶೇ. 10 ರಷ್ಟು ಕೂಡ ಸಂಸ್ಕೃತ ಪದಗಳು ಇರುವುದಿಲ್ಲ. ಆಗ ಬಹುಶಃ ಭೈರಪ್ಪನವರಿಗೆ ಸಂಸ್ಕೃತ ಕನ್ನಡಕ್ಕೆ ಅಮ್ಮನಂತಲ್ಲ, ತಂಗಿಯಂತೋ ತಮ್ಮನಂತೋ ತೋರಬಹುದು ಎಂದಿದ್ದಾರೆ.

ಭೈರಪ್ಪನವರು ಕನ್ನಡದ ಬಹುದೊಡ್ಡ ಸಾಹಿತಿಗಳು. ಕನ್ನಡ ನುಡಿಯ ಋಣ, ಕನ್ನಡಿಗರ ಪ್ರೀತಿಯ ಋಣ ಅವರ ಮೇಲಿದೆ. ಹೀಗಾಗಿ ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಅವರು ಬಿಡಲಿ, ಅವರಿಗೆ ಒಳಿತಾಗಲಿ ಎಂದು ಹಾರೈಸುವೆ ಎಂದಿದ್ದಾರೆ.

Previous articleಮಹೇಶ್ ಜೋಶಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ
Next articleಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ನಿಂದ ನೋಟಿಸ್‌