ವಿವಿಧ ಸಮಿತಿಗಳು ಹಾಗೂ ಅಧಿವೇಶನದ ಪ್ರಶ್ನೋತ್ತರ ತಯಾರಿ ಮಾಡುವಂತಹ ಅನುಭವ ಇರುವ ಸಿಬ್ಬಂದಿಯ ಅವಶ್ಯಕತೆ ಇರುತ್ತದೆ
ಬೆಂಗಳೂರು: ಲಿಂಗ ತಾರತಮ್ಯ ಮಾಡದೆ ಪಾರದರ್ಶಕವಾಗಿ ನಂಬಿಕಸ್ಥ, ಅನುಭವೀ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕಾರ್ಯದರ್ಶಿಗಳ 2 ನೇಮಕಕ್ಕೆ ಹಾಲಿ ಸಚಿವರೊಬ್ಬರ ಅಳಿಯ ಹಾಗೂ ಶಾಸಕಿಯೊಬ್ಬರ ಪತಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ಇವೆಲ್ಲ ಪ್ರಹಸನವೇ ? ಕಾರ್ಯದರ್ಶಿ 2 ಹುದ್ದೆಗೆ ಸಾಮಾನ್ಯ ಘಟಕದಲ್ಲಿ ಕೆಲಸ ಮಾಡಿ, ಶಾಸನ ರಚನೆ, ವಿವಿಧ ಸಮಿತಿಗಳು ಹಾಗೂ ಅಧಿವೇಶನದ ಪ್ರಶ್ನೋತ್ತರ ತಯಾರಿ ಮಾಡುವಂತಹ ಅನುಭವ ಇರುವ ಸಿಬ್ಬಂದಿಯ ಅವಶ್ಯಕತೆ ಇರುತ್ತದೆ. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಗಣಕ ಘಟಕದ ಅಧಿಕಾರಿಯನ್ನು ನೇಮಕ ಮಾಡುತ್ತಿರುವುದು ಯಾರ ಒತ್ತಡ/ಪ್ರಭಾವದ ಮೇಲೆ ಎಂಬುದನ್ನು ಯು.ಟಿ. ಖಾದರ್ ಅವರು ಸ್ಪಷ್ಟಪಡಿಸಲಿ. ಸ್ವಜನಪಕ್ಷಪಾತ, ಭ್ರಷ್ಟಾಚಾರ ವಿರುದ್ಧ ಉದ್ದುದ್ದ ಭಾಷಣ ಬಿಗಿಯುವವರು ಈ ರೀತಿಯಾದ ಅನುಕೂಲಸಿಂಧು ರಾಜಕಾರಣಕ್ಕೆ ಒಳಗೊಳಗೇ ಗುಟ್ಟಾಗಿ ನೇಮಕ ಮಾಡಿಕೊಳ್ಳುವುದು ಎಷ್ಟು ಸರಿ ಎಂಬುದನ್ನು ಹೇಳಲಿ. ಇಷ್ಟೇ ಅಲ್ಲದೆ ಮಹಿಳಾ ಸಬಲೀಕರಣ ಬಗ್ಗೆ ಮಾತನಾಡುವವರು ಒಬ್ಬ ದಕ್ಷ ಮಹಿಳಾ ಅಧಿಕಾರಿಯ ದಕ್ಷತೆಯನ್ನು ಪ್ರಶ್ನಿಸುವುದು ಅಲ್ಲದೆ, ಇನ್ನೊಂದು ಸ್ಥಾನಕ್ಕೆ ತಮ್ಮ ‘ನೆಂಟರಿಷ್ಟರನ್ನು’ ನೇಮಕ ಮಾಡಿಕೊಂಡರೆ ಸ್ವಾಮೀ ಕಾರ್ಯ, ಸ್ವಕಾರ್ಯ ಎರಡೂ ಸಾಧಿಸಿದಂತಾಗುತ್ತದೆ ಎಂಬುದು ಇವರ ತಂತ್ರವಷ್ಟೇ. ಕಾರ್ಯದರ್ಶಿ 2 ಹುದ್ದೆಗೆ ಯಾವುದೇ ಕಾರಣಕ್ಕೂ ಪ್ರಭಾವಿ ಸಚಿವರ, ಶಾಸಕರ ನೆಂಟರನ್ನು ನೇಮಕ ಮಾಡಿಕೊಳ್ಳದೆ, ಲಿಂಗ ತಾರತಮ್ಯ ಮಾಡದೆ ಪಾರದರ್ಶಕವಾಗಿ ನಂಬಿಕಸ್ಥ, ಅನುಭವೀ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದಿದ್ದಾರೆ.