ಮರಾಠರಿಗೆ ಪಾಠ ಕಲಿಸಲು ಕರ್ನಾಟಕ ಬಂದ್
ಬೆಂಗಳೂರು: ಮಾರ್ಚ್ 3 ರಂದು ರಾಜಭವನಕ್ಕೆ ಮುತ್ತಿಗೆ ಹಾಗೂ ಮಾರ್ಚ್ 7 ರಂದು ಬೆಳಗಾವಿ ಚಲೋಗೆ ಕರೆ ನೀಡಲಾಗಿದ್ದು ಮಾ.22ರಂದು ಕರ್ನಾಟಕ ಬಂದ್‌ಗೆ ಘೋಷಣೆ ಮಾಡಲಾಗಿದೆ.
ನಗರದ ವುಡ್ ಲ್ಯಾಂಡ್ಸ್ ಹೋಟೆಲ್‌ನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಹೈವೋಲ್ಟೇಜ್ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾರ್ಚ್ 11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್, ಮಾ.14 ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಮತ್ತು ಮಾ.17 ರಂದು ಹೊಸಕೋಟೆ – ಚೆನ್ನೈ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ.
ಅಖಂಡ ಕರ್ನಾಟಕ ಬಂದ್: ಮರಾಠಿ ಪುಂಡರು ಮಿತಿ ಮೀರಿ ವರ್ತಿಸುತ್ತಿದ್ದು ಅವರ ವಿರುದ್ಧ ಸಮರ ಸಾರಲು ಮಾರ್ಚ್ 22 ರಂದು ಬೆಳೆಗ್ಗೆ 6 ಗಂಟೆಯಿಂದ ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಕರೆದು ಮಾತನಾಡಿದರೂ ಈ ಬಂದ್ ಅನ್ನು ವಾಪಸ್ ಪಡೆಯಲ್ಲ. ನನ್ನ ಜೀವನದಲ್ಲಿ ಒಮ್ಮೆ ಜಾರಿದ್ದೇನೆ. ಇನ್ನು ಮುಂದೆ ಯಾರೇ ಹೇಳಿದರೂ ಇಟ್ಟ ಹೆಜ್ಜೆ ಹಿಂದೆಕ್ಕೆ ಇಡಲ್ಲ. ಮಾರ್ಚ್ 22 ರಂದು ಬೆಳಗ್ಗೆ ಟೌನ್ ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ಮಾಡುತ್ತೇವೆ. ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಸಹಿಸಲ್ಲ, ಅದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.