ಅಕ್ರಮ ಮರಳು ದಂಧೆಗೆ ಉಪಗ್ರಹದ ಕಣ್ಗಾವಲು

0
16

ಕರ್ನಾಟಕದಲ್ಲಿ 7 ಪ್ರಮುಖ ನದಿಗಳು ಕಣಿವೆಗಳಿದ್ದು ಪ್ರತಿದಿನ ನದಿಗಳು ಸಾವಿರಾರು ಟನ್ ಮರಳನ್ನು ಹೊತ್ತು ದಡಗಳಲ್ಲಿ ಚೆಲ್ಲಿ ಹೋಗುತ್ತವೆ. ಈ ಮರಳು ಈಗ ದೊಡ್ಡ ಮಾರಾಟದ ವಸ್ತುವಾಗಿದೆ. ಅದರಲ್ಲೂ ಸ್ಥಳೀಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪ್ರಮುಖ ದಂಧೆ ಇದೇ ಆಗಿದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ರಚನೆಯಾಗಿದ್ದರೂ ಅಕ್ರಮ ದಂಧೆ ನಿಂತಿಲ್ಲ. ಇತ್ತೀಚೆಗೆ ಒಂದು ಪ್ರಕರಣದಲ್ಲಿ ಹೈಕೋರ್ಟ್ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಮರಳು ದಂಧೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಉಪಗ್ರಹ ಕಣ್ಗಾವಲು ವ್ಯವಸ್ಥೆಯನ್ನು ಬಳಸುವಂತೆ ನ್ಯಾಯಮೂರ್ತಿಗಳೇ ಸಲಹೆ ನೀಡಿದ್ದಾರೆ. ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇಸ್ರೋ ಸಂಸ್ಥೆಯ ನೆರವು ಪಡೆದುಕೊಳ್ಳುವಂತೆ ಆದೇಶಿಸಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತು ನಡೆದುಕೊಳ್ಳುವುದು ಒಳಿತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಈಗ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲೂ ಪ್ರಭಾವಿ ರಾಜಕಾರಣಿಗಳ ಮಕ್ಕಳಿಗೆ ಇದೇ ಪ್ರಮುಖ ಆದಾಯವಾಗಿದೆ. ಕಾವೇರಿ ನದಿಯಲ್ಲಿ ಮಧ್ಯದಿಂದಲೇ ಮರಳನ್ನು ಟನ್‌ಗಟ್ಟಲೆ ಎತ್ತಿ ಲಾರಿಗಳಿಗೆ ತುಂಬುವ ಕ್ರೇನ್‌ಗಳನ್ನು ಕೋಲ್ಕತ್ತದಿಂದ ತರಲಾಗಿದೆ. ಇದು ಸಮುದ್ರದಲ್ಲಿ ಬಳಕೆಯಾಗುತ್ತಿತ್ತು. ಹಗಲು ಇರುಳು ಇದನ್ನು ಬಳಸಿ ನದಿಯ ಒಡಲನ್ನು ಬರಿದು ಮಾಡುವ ಕೆಲಸ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಡ್ರೋನ್ ಕ್ಯಾಮೆರಾ, ಅಲ್ಲಲ್ಲಿ ನದಿ ದಡದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಜನಸಾಮಾನ್ಯರು ದೂರು ಸಲ್ಲಿಸಲು ಅನುಕೂಲವಾಗುವ ಆಪ್‌ಗಳನ್ನು ಸೃಷ್ಟಿಸಿದರೆ ಸಾಕ್ಷಾತ್ ಚಿತ್ರಗಳನ್ನು ಪಡೆದುಕೊಳ್ಳಬಹುದು. ಉಪಗ್ರಹ ಕಣ್ಗಾವಲಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳೇ ಹೇಳಿದ್ದಾರೆ. ಸೂಕ್ತ ಸಾಕ್ಷ್ಯವಿಲ್ಲದೆ ನ್ಯಾಯಾಲಯಕ್ಕೆ ಪ್ರಕರಣಗಳು ವಿಚಾರಣೆಗೆ ಬಂದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಬರುವುದಿಲ್ಲ. ಹೀಗಾಗಿ ತಪ್ಪಿತಸ್ಥರು ಬಚಾವ್ ಆಗಲು ಸಾಧ್ಯವಾಗಿದೆ. ದಂಡ ವಿಧಿಸಿದರೂ ಅದರಿಂದ ಈ ದಂಧೆ ನಿಲ್ಲುವುದಿಲ್ಲ. ಜೈಲು ಶಿಕ್ಷೆ ವಿಧಿಸಿದರೆ ಮಾತ್ರ ನದಿಗಳನ್ನು ರಕ್ಷಿಸಬಹುದು. ರಾಜ್ಯದಲ್ಲಿ ವಾರ್ಷಿಕ ೩೦೦ಕ್ಕೂ ಹೆಚ್ಚು ಅಕ್ರಮ ಮರಳು ದಂಧೆ ಪ್ರಕರಣಗಳು ದಾಖಲಾಗುತ್ತಿವೆ. ಈ ದಂಧೆಯಲ್ಲಿ ನಿರತರಾದವರು ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ಕಡೆ ಕೊಲೆಗಳು ನಡೆದಿವೆ. ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈ ದಂಧೆಕೋರರನ್ನು ಬಂಧಿಸಲು ಹಿಂಜರಿಯುವಂತಾಗಿದೆ. ಒಟ್ಟು ೬೫೦ ನದಿಗಳಲ್ಲಿ೨೫೧ ಸ್ಥಳಗಳಲ್ಲಿ ಮರಳು ತೆಗೆಯುವ ಕೆಲಸ ನಡೆಯುತ್ತಿದೆ. ಇದರ ಒಟ್ಟು ವಹಿವಾಟು ೩೦ ಸಾವಿರ ಕೋಟಿ ರೂ. ರಾಜ್ಯಕ್ಕೆ ತೆರಿಗೆ ರೂಪದಲ್ಲಿ ಬರುವುದು ಕೇವಲ ೧೧೦ ಕೋಟಿ ರೂ. ಮಾತ್ರ. ಶೇ. ೭೫ರಷ್ಟು ಮರಳು ಅಕ್ರಮವಾಗಿ ಮಾರಾಟವಾಗುತ್ತಿದೆ. ಇದಲ್ಲದೆ ಫಿಲ್ಟರ್ ಮರಳು ಕೂಡ ಮಾರಾಟವಾಗುತ್ತಿದೆ. ಇದು ಕೆರೆಗಳಲ್ಲಿ ತೆಗೆದ ಮರಳು. ಇದರಿಂದ ಮಣ್ಣಿ ತನ್ನ ಸತ್ವವನ್ನೇ ಕಳೆದುಕೊಳ್ಳುತ್ತದೆ. ಸಿಮೆಂಟ್ ತ್ಯಾಜ್ಯವನ್ನು ಮರಳಿನಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಾರೆ. ಎಂ- ಸ್ಯಾಂಡ್ ಉತ್ತಮ ಪರ್ಯಾಯ. ಆದರೆ ದಂಧೆ ಕೋರರು ಇದು ಜನಪ್ರಿಯಗೊಳ್ಳಲು ಅವಕಾಶ ನೀಡುವುದಿಲ್ಲ. ಎಂಎಸ್‌ಐಎಲ್ ವಿದೇಶದಿಂದ ಮರಳು ತರಿಸಿ ಮಾರಾಟ ಮಾಡಲು ಯತ್ನಿಸಿತು. ಆದರೆ ಫಲಕಾರಿಯಾಗಲಿಲ್ಲ. ಹಲವು ಜಿಲ್ಲೆಗಳಲ್ಲಿ ಇದೇ ದಂಧೆ ಪ್ರಮುಖ ಆದಾಯದ ಮೂಲವಾಗಿದೆ. ವಿದೇಶದಿಂದ ಮರಳು ಆಮದು ಮಾಡಿಕೊಂಡ ಮಂಗಳೂರಿನ ಖಾಸಗಿ ಕಂಪನಿ ೫ ಕೋಟಿ ರೂ. ನಷ್ಟ ಅನುಭವಿಸಿತು. ಒಂದು ಅಂದಾಜಿನ ಪ್ರಕಾರ ೫ ಕೋಟಿ ಟನ್ ಮರಳು ಪ್ರತಿ ವರ್ಷ ಮಾರಾಟವಾಗುತ್ತಿದೆ. ಆದರೂ ೯೦ ಲಕ್ಷ ಟನ್ ಕೊರತೆ ಇದೆ. ಜಿಪಿಎಸ್, ಜಿಐಎಸ್ ತಂತ್ರಜ್ಞಾನ ಬಳಸಿ ಸಾಕ್ಷ್ಯ ಸಮೇತ ದಂಧಕೋರರನ್ನು ಹಿಡಿಯಬಹುದು. ಆದರೆ ಹಿಡಿಯುವವರು ಯಾರು? ಯಾವ ಜನಪ್ರತಿನಿಧಿಯೂ ಇದರ ವಿರುದ್ಧ ಚಕಾರ ಎತ್ತುವುದಿಲ್ಲ. ಈಗ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಪರಿಣಾಮ ಆಗಬಹುದು. ನದಿ ನೀರು ಬಳಸಲು ಯಾರನ್ನು ಕೇಳಬೇಕು ಎನ್ನುವ ಧೋರಣೆ ಮರಳಿಗೂ ಅನ್ವಯವಾಗುತ್ತಿದೆ. ಇವುಗಳೆಲ್ಲ ಸಮಾಜದ ಸಂಪತ್ತು ಎಂಬುದನ್ನು ಒಪ್ಪುವುದಿಲ್ಲ. ಅದರಲ್ಲೂ ರೌಡಿಗಳ ಗುಂಪು ಇದನ್ನೇ ಪ್ರಮುಖ ಆದಾಯದ ಮೂಲ ಮಾಡಿಕೊಂಡಿವೆ. ಇಂಥ ಗುಂಪುಗಳಿಗೆ ಜನಪ್ರತಿನಿಧಿಗಳು ಬೆಂಬಲ ನೀಡುತ್ತಿರುವುದು ನಿಜಕ್ಕೂ ದುರ್ದೈವ. ಈ ಗುಂಪುಗಳಿಗೆ ಕಡಿವಾಣ ಹಾಕಬೇಕಾದವರೇ ಅವರೊಂದಿಗೆ ಶಾಮೀಲಾದರೆ ಜನಸಾಮಾನ್ಯರು ಏನು ಮಾಡಲು ಸಾಧ್ಯ? ಅಲ್ಲಿ ಇಲ್ಲಿ ಒಂದಿಬ್ಬರು ಧ್ವನಿ ಎತ್ತಲು ಹೋಗಿ ಬಲಿಯಾಗಿರುವ ಘಟನೆಗಳು ನಡೆದಿದ್ದರೂ ಏನೂ ನಡೆದೇ ಇಲ್ಲ ಎಂಬಂತೆ ಸ್ಥಳೀಯರು ಇರುತ್ತಾರೆ. ಈ ದುಷ್ಟಶಕ್ತಿಗಳೇ ಚುನಾವಣೆ ಕಾಲದಲ್ಲಿ ಸಕ್ರಿಯವಾಗಿರುತ್ತವೆ ಎಂಬುದನ್ನು ಮರೆಯುವ ಹಾಗಿಲ್ಲ. ಇಂಥ ವಿಷಚಕ್ರದ ಬೆಂಗಾವಲು ಹೊಂದಿರುವ ಅಕ್ರಮ ಜಾಲಕ್ಕೆ ಕೊಡಲಿಪೆಟ್ಟು ಕೊಡುವವರು ಯಾರು? ಹೈಕೋರ್ಟ್ ಆದೇಶಕ್ಕೆ ಸರ್ಕಾರ ಬೆಲೆ ಕೊಡುತ್ತದೆಯೇ?

Previous articleವಿಶ್ವಕಪ್​ ಫೈನಲ್​ ಸೋಲಿನ ಸೇಡು ತೀರಿಸಿಕೊಂಡ ಟೀಮ್‌ ಇಂಡಿಯಾ
Next articleಅಚಲ ಭಕ್ತಿಯಿಂದ ಮಾಡಿದ ಸತ್ಕಾರ್ಯಕ್ಕೆ ಸತ್ಫಲ