ಹುಬ್ಬಳ್ಳಿ: ಅಕ್ಕಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ವರ್ಷ ನಾನು ಕೇಳಿದಾಗ ಅಕ್ಕಿ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ನಾವು ಕಳೆದ ಬಾರಿ ಹೊಸ ಅಕ್ಕಿ ಸ್ಟಾಕ್‌ಗೆ ಬಹಳ ಹತ್ತಿರ ಇದ್ದೇವು. ಇಡೀ ದೇಶದಲ್ಲಿ ಅಕ್ಕಿ ಸಂಗ್ರಹ ಕಡಿಮೆಯಾಗುತ್ತದೆ ಎಂಬ ಆತಂಕವಿತ್ತು. ಹೀಗಾಗಿ ೨೦೨೩ ಜೂನ್ ೧೩ಕ್ಕೆ ಓಪನ್ ಮಾರ್ಕೆಟ್ ಸಪೋರ್ಟ್ ಸಿಸ್ಟಮ್‌ನಲ್ಲಿ ನಾವು ನಿಲ್ಲಿಸಿದ್ದೇವು ಎಂದರು.
ರಾಜ್ಯ ಸರ್ಕಾರದವರು ಜನತೆಗೆ ಐದು ಕೆ.ಜಿ. ಅಕ್ಕಿ ಬದಲು ಹತ್ತು ಕೆ.ಜಿ. ಬೇಕೋ ಬೇಡವೋ ಎಂದು ಜನರಿಗೆ ಕೇಂದ್ರ ಸರ್ಕಾರ ಕೊಟ್ಟರೆ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಇದೀಗ ಕೇಂದ್ರದ ಬಳಿ ೩೩೦ ಲಕ್ಷ ಟನ್ ಅಕ್ಕಿ ಸಂಗ್ರಹ ಆಗಿರುವುದರಿಂದ ನಾವು ಈಗ ಓಪನ್ ಮಾರ್ಕೆಟ್ ಸಪೋರ್ಟ್ ಸಿಸ್ಟಮ್‌ನಲ್ಲಿ ರಾಜ್ಯಕ್ಕೂ, ಖಾಸಗಿಯವರಿಗೂ ಅಕ್ಕಿ ನೀಡಲು ಅವಕಾಶ ನೀಡಿದ್ದೇವೆ. ಈ ಹಿಂದೆ ಒಂದು ಕೆ.ಜಿ. ಅಕ್ಕಿಗೆ ೩೪ ರೂ. ಇದ್ದ ದರವನ್ನು ಈಗ ೨೮ ರೂ. ಗೆ ಇಳಿಸಿದ್ದೇವೆ. ಇದು ನರೇಂದ್ರ ಮೋದಿಯವರು ಮಾಡಿರುವ ಉತ್ತಮ ನಿರ್ಧಾರವಾಗಿದೆ ಎಂದು ಹೇಳಿದರು.
ಯಾವುದೇ ರಾಜ್ಯ ಸರ್ಕಾರಗಳಿಗೆ ಕಳೆದ ಬಾರಿ ಅಕ್ಕಿ ಸಂಗ್ರಹ ಕಡಿಮೆ ಇರುವುದರಿಂದ ಅಕ್ಕಿ ವಿತರಣೆಯನ್ನು ಸ್ಥಗಿತಗೊಳಿಸಿದ್ದೇವು. ಇದೀಗ ಮತ್ತೆ ಆರಂಭಿಸಿದ್ದೇವೆ. ಹೀಗಾಗಿ ಎಲ್ಲದರಲ್ಲಿಯೂ ಕಲ್ಲು ಹುಡುಕುವ ಕೆಲಸವನ್ನು ಸಿದ್ದರಾಮಯ್ಯನವರು ಬಿಡಬೇಕು. ನೀವು ಎಷ್ಟು ಜನರಿಗೆ ಅಕ್ಕಿಯ ಹಣ ೧೭೦ ರೂ. ನೀಡಿದ್ದೀರಿ?, ಕಳೆದ ಎರಡು ತಿಂಗಳುಗಳಿಂದ ಗೃಹಲಕ್ಷ್ಮೀ ಯೋಜನೆ ಹಣವನ್ನು ಏಕೆ ಸ್ಥಗಿತಗೊಳಿಸಿದ್ದೀರಿ, ವೃದ್ಯಾಪ ವೇತನ ಹಣ ಜಮೆ ಏಕೆ ಆಗಿಲ್ಲ?, ಪೆಟ್ರೋಲ್, ಡಿಸೇಲ್, ಹಾಲಿನ ದರ ಏಕೆ ಏರಿಕೆ ಮಾಡಿದ್ದೀರಿ ಎಂಬುದನ್ನು ಬಹಿರಂಗ ಪಡಿಸಬೇಕು. ಅಂದು ನಾವು ಒಂದು ರೂ. ಏರಿಕೆ ಮಾಡಿದಾಗ ಬೊಬ್ಬೆ ಹೊಡೆದವರಿಗೆ ಇಂದು ಮೂರುವರೆ ರೂ. ಪೆಟ್ರೋಲ್ ದರ ಏರಿಕೆ ಮಾಡಿದ್ದೀರಿ ನಾಚಿಕೆಯಾಗಬೇಕು ನಿಮಗೆ ಎಂದರು.
ಕೇಂದ್ರ ಸರ್ಕಾರ ವಿತರಣೆ ಮಾಡುವ ಭಾರತ್ ಅಕ್ಕಿ, ದಾಲ್ ಹಾಗೂ ಮೈದಾ ಬಂದ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರು ಟೀಕೆ ಮಾಡಿದ್ದಾರೆ. ಭಾರತ್ ಅಕ್ಕಿ ಬಂದ್ ಆಗಿಲ್ಲ. ಮೊದಲನೇ ಆದೇಶ ಜೂನ್ ೩೦ ರವರೆಗೆ ಇತ್ತು. ಆ ಪ್ರಕಾರ ನಾವು ಇದ್ದ ಸಂಗ್ರಹವನ್ನು ವಿತರಣೆ ಮಾಡಿದ್ದೇವೆ. ಮಾರುಕಟ್ಟೆಯಲ್ಲಿ ಇನ್ನೂ ಸಂಗ್ರಹವಿದೆ. ಇದೀಗ ಜುಲೈನಲ್ಲಿ ಮತ್ತೆ ಮುಂದುವರೆಸಲಿದ್ದೇವೆ. ಮೊದಲು ಸಿದ್ದರಾಮಯ್ಯನವರು ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡು, ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದರು.