ಹೊಸಪೇಟೆ: ಒಂದೆಡೆ ಹಿಂದೂ ಸಂಘಟನೆ, ಮತ್ತೊಂದೆಡೆ ಮುಸ್ಲಿಂ ಸಂಘಟನೆ, ಎರಡೂ ಕಡೆಯವರಲ್ಲಿ ಭಯೋತ್ಪಾದಕರ ಫ್ಯಾಕ್ಟರಿಯೇ ಇದೆ. ಗಲಾಟೆ ಮಾಡಿದವರ, ಹತ್ಯೆ ಮಾಡಿದವರ ಮಾತ್ರ ಬಂಧನವಾಗುತ್ತದೆ. ಆದರೆ, ಈ ಹಿಂದೆ ಇರುವ ಶಕ್ತಿಗಳ ಬಂಧನವಾಗುತ್ತಿಲ್ಲ. ಯಾರ ಕಡೆಯವರು ಯಾರೇ ಇರಲಿ ಶಿಕ್ಷೆಯಾಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ಹೊಸಪೇಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿ, ಒಂದು ಕೈಯಿಂದ ಚಪ್ಪಾಳೆ ತಟ್ಟೋಕೆ ಆಗುವುದಿಲ್ಲ. ಹಿಂದೂ ಮತ್ತು ಮುಸ್ಲಿಂ ಸಂಘಟನೆ ಈ ಎರಡು ಕಡೆಯವರು ಯಾರಿಗೇನು ಕಮ್ಮಿಯಿಲ್ಲ ಎನ್ನುವಂತೆ ಇದ್ದಾರೆ. ಆರೋಪಿಗಳು ಜೈಲಿಗೆ ಹೋದಾಗ, ಕುಟುಂಬ ಸಂರಕ್ಷಣೆ ಮಾಡೋರು ಯಾರು… ಕೋರ್ಟ್ ಅಲೆದಾಡುವವರು ಯಾರು? ನಾವ್ಯಾರಿಗೂ ಕುಮ್ಮುಕ್ಕು ಕೊಡಲ್ಲ, ನಮ್ಮ ಪಕ್ಷದವರು ಇದ್ದರೂ ಜೈಲಿಗೆ ಹಾಕಿ ಎಂದು ಹೇಳುತ್ತೇವೆ ಎಂದರು.
ಇವರೆಷ್ಟು ಸಂಖ್ಯೆಯಲ್ಲಿ ಹತ್ಯೆ ಮಾಡಿದ್ದಾರೋ ಅವರು ಅಷ್ಟೇ ಸಂಖ್ಯೆಯಲ್ಲಿ ಹತ್ಯೆ ಮಾಡಿದ್ದಾರೆ. ಗಲಾಟೆ ಮಾಡಿದವರು, ಮರ್ಡರ್ ಮಾಡಿದವರು ಅರೆಸ್ಟ್ ಆಗ್ತಾರೆ. ಆದರೆ, ಹಿಂದೆ ಇರುವ ಶಕ್ತಿ ಅರೆಸ್ಟ್ ಆಗುತ್ತಿಲ್ಲ. ನಾನು ಗೃಹಮಂತ್ರಿ ಆಗಿದ್ದಾಗ ಇಂತಹ ಘಟನೆಗಳ ಹಿಂದೆ ಯಾರು ಇದ್ದಾರೋ ಅವರನ್ನೂ ಫಿಟ್ ಮಾಡುತ್ತಿದ್ದೆ. ಬಷೀರ್, ದೀಪಕ್ ರಾವ್ ಪ್ರಕರಣದಲ್ಲಿ ಫಿಟ್ ಮಾಡಿದ್ದೆವು. ಐದಾರು ವರ್ಷ ಯಾವುದೇ ಹತ್ಯೆಗಳು ಆಗಿರಲಿಲ್ಲ.. ಈಗ ಮತ್ತೆ ಪ್ರಾರಂಭವಾಗಿದೆ. ಎರಡೂ ಕಡೆಯವರು ಪ್ರೀ ಪ್ಲಾನ್ ಮಾಡ್ತಾರೆ. ಕರಾವಳಿ ಚರಿತ್ರೆಯನ್ನು ತೆಗೆದು ನೋಡಿದರೆ ಯಾರೇನೂ ಕಮ್ಮಿ ಇಲ್ಲ ಎಂಬುದು ತಿಳಿಯುತ್ತದೆ. ಗಲಭೆ ಕುರಿತು ನಗ್ನ ಸತ್ಯ ಎಂಬ ಪುಸ್ತಕ ಬಿಡುಗಡೆ ಮಾಡಿದ್ದೆ, ಇದನ್ನು ಓದಿದರೆ, ಗೊತ್ತಾಗುತ್ತಿದೆ ಎಂದು ತಿಳಿಸಿದರು.