ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿದ್ದ ಶ್ರೀ ಅಖಿಲ ಹವ್ಯಕ ಮಹಾಸಭಾ ಆಯೋಜಿಸಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಅದ್ದೂರಿ ತೆರೆ ಕಂಡಿದೆ.
ಶುಕ್ರವಾರದಿಂದ ಆರಂಭವಾದ ಸಮ್ಮೇಳನದಲ್ಲಿ ವಿವಿಧ ಮಠಾಧೀಶರು, ಗಣ್ಯಾತಿಗಣ್ಯರು ಭಾಗಿಯಾಗಿದ್ದರಲ್ಲದೆ, ದೇಶ ವಿದೇಶಗಳಿಂದ ಹವ್ಯಕ ಸಮುದಾಯದ ಸಾವಿರಾರು ಮಂದಿ ಭಾಗಿಯಾಗಿ ಸಮ್ಮೇಳನಕ್ಕೆ ಕಳೆ ತಂದರು. ಈ ಸಮ್ಮೇಳನದಲ್ಲಿ ಹವ್ಯಕ ಸಂಸ್ಕೃತಿಯನ್ನು ಬಿಂಬಿಸುವಂತಹ ಹಲವಾರು ಕಾರ್ಯಕ್ರಮಗಳು ನಡೆದವು. ಆಹಾರ ಸಂಸ್ಕೃತಿಯೂ ಇಲ್ಲಿನ ವಿಶೇಷವಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯದ ಹಲವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಹವ್ಯಕ ಸಮುದಾಯದವರಿಗೆ ಪ್ರೋತ್ಸಾಹಿಸುವ ಕಾರ್ಯವೂ ಆಯಿತು. ಸಮ್ಮೇಳನದಲ್ಲಿ ಹವ್ಯಕರ ಸಂಸ್ಕೃತಿ, ಪಾಕೋತ್ಸವ, ಅವರ ಆಹಾರ ಪದ್ಧತಿ ಜೊತೆಗೆ ಹವ್ಯಕ ಸಮುದಾಯ ನಡೆದುಬಂದಿರುವ ಹಾಗೂ ಸಾಗುತ್ತಿರುವ ಸಂಸ್ಕೃತಿಯನ್ನು ಬಿಂಬಿಸುವಂತಹ ಮಳಿಗೆಗಳು ಗಮನ ಸೆಳೆದವು. ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಕಟ್ಟಿತ್ತು. ೧೦೦ಕ್ಕೂ ಅಧಿಕ ಪಾರಂಪರಿಕ ವಸ್ತುಗಳ ಪ್ರದರ್ಶನ ನೋಡುಗರನ್ನು ಸೆಳೆಯುತ್ತಿತ್ತು. ಇದು ಮಾತ್ರವಲ್ಲದೆ ಅಳಿವಿನಂಚಿನಲ್ಲಿರುವ ದೇಸಿ ತಳಿ ಗೋವುಗಳ ಪ್ರದರ್ಶನವೂ ಅಲ್ಲಿತ್ತು.
ಆರಂಭಿಕ ದಿನ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ವೇಳೆ ಭಾಗವಹಿಸಿದ್ದ ಗಣ್ಯರು ಹವ್ಯಕ ಸಮುದಾದವರ ಸಾಧನೆ, ಕಾರ್ಯಗಳನ್ನು ತಿಳಿಸಿದರಲ್ಲದೆ, ಈ ಸಮುದಾಯ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಕೊಂಡಾಡಿದರು.
ಜನಸಂಖ್ಯೆ ಇಳಿಕೆಗೆ ಆತಂಕ
ಸಮ್ಮೇಳನದ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಮಠಾಧೀಶರು, ಗಣ್ಯರು ಮಾತನಾಡುವ ವೇಳೆ ಹವ್ಯಕ ಸಮುದಾಯದ ಜನಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದೂ ಉಂಟು. ಹೆಚ್ಚು ಮಕ್ಕಳನ್ನು ಹಡೆದಲ್ಲಿ ಮಠಗಳಿಗೆ ನೀಡಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿ ನಿಮಗೆ ವಾಪಸ್ ಕೊಡುತ್ತೇವೆ ಎಂದು ಸಮುದಾಯದವರಿಗೆ ಅಭಯ ನೀಡಿದರು.
ಆಸ್ತಿಕತೆಯತ್ತ ಒಲವಿಗೆ ಕಿವಿಮಾತು
ಮೂರು ದಿನಗಳ ಕಾಲ ಸಭಾ ಕಾರ್ಯಕ್ರಮವಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಣ್ಮನ ಸೆಳೆದವು. ಹಲವಾರು ಕೃತಿಗಳು ಲೋಕಾರ್ಪಣೆಗೊಂಡವು. ಪ್ರಮುಖವಾಗಿ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮಠಾಧೀಶರು ಹವ್ಯಕ ಸಮುದಾಯದವರು ಮತ್ತಷ್ಟು ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ತಮ್ಮ ಸಂಸ್ಕೃತಿಯನ್ನು ಎಂದಿಗೂ ಬಿಡಬಾರದು. ಯುವಪೀಳಿಗೆ ಆಸ್ತಿಕತೆಯತ್ತ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.