ರಾಜ್ಯಪಾಲರು ಕೇಂದ್ರದ ಕೈಗೊಂಬೆ

0
15

ಮಂಗಳೂರು: ಮೈಸೂರು ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರಕಾರದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಸಿದ್ದರಾಮಯ್ಯರನ್ನು ಹೇಗಾದರೂ ಸಿಲುಕಿಸಬೇಕಿದೆ. ಸಿಎಂ ವಿರುದ್ಧ ದೂರು ನೀಡಿರುವ ಟಿ.ಜೆ.ಅಬ್ರಹಾಂ ಹಿನ್ನೆಲೆ ನಿಮಗೆ ಗೊತ್ತಿದೆ, ಅವರಿಗೆ ಸುಪ್ರೀಂ ಕೋರ್ಟ್ ಕೂಡ ೨೦ ಲಕ್ಷ ರೂ. ದಂಡ ಹಾಕಿದೆ. ಅವರ ನೀಡಿರುವ ದೂರನ್ನು ಪಡೆದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೊಟೀಸ್ ಮಾಡಿದ್ದಾರೆ. ಯಾವುದೇ ಕಾನೂನು ತಜ್ಞರ ಜೊತೆಗೂ ಅವರು ಚರ್ಚೆ ಮಾಡಿಲ್ಲ. ನೂರಾರು ಪುಟಗಳ ದೂರು ಪಡೆದು ಕೆಲವೇ ಗಂಟೆಗಳಲ್ಲಿ ನೊಟೀಸ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಪ್ರಕಾರ ಹೋಗಿ ಸಿದ್ದರಾಮಯ್ಯ ಏನು ತಪ್ಲು ಮಾಡಿದ್ದಾರೆ ತೋರಿಸಲಿ. ಸಿದ್ದರಾಮಯ್ಯ ಕಳೆದುಕೊಂಡ ಭೂಮಿ ವಾಪಸ್ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರ ಕಾನೂನಿನಡಿ ತಪ್ಪು ತೋರಿಸಲಿ. ಅಧಿಕಾರ ದುರುಪಯೋಗದ ಬಗ್ಗೆ ಅವರು ನಮಗೆ ತೋರಿಸಲಿ ಎಂದು ಸವಾಲು ಹಾಕಿದರು.
ಮೈಸೂರು ಮುಡಾದಲ್ಲಿ ಎಲ್ಲಾ ರಾಜಕೀಯ ನಾಯಕರು ಇದ್ದ ಬೋರ್ಡ್ ಇತ್ತು. ಆಗಲೂ ಅನೇಕ ಜನರಿಗೆ ಇವರು ಭೂಮಿ ಕೊಟ್ಟಿದ್ದಾರೆ. ಹಾಗಾಗಿ ಇವರ ಪಾದಯಾತ್ರೆಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪರ ಮೇಲೆ ಪೊಕ್ಸೋ ಕೇಸ್ ನಡೀತಾ ಇದೆ. ವಿಜಯೇಂದ್ರ ಮೇಲೂ ಕೇಸ್ ಇದೆ, ಹೀಗಿರೋವಾಗ ಇವರಿಗೆ ಏನು ನೈತಿಕತೆ ಇದೆ. ನಾವು ಕೂಡ ಇದಕ್ಕೆ ಎಲ್ಲಾ ಕಡೆ ಉತ್ತರ ಕೊಡುತ್ತೇವೆ ಎಂದವರು ಹೇಳಿದರು.
ಪಾದಯಾತ್ರೆ ವಿಚಾರದಲ್ಲಿ ಅಧಿಕೃತವಾಗಿ ಅನುಮತಿ ಸಹಜವಾಗಿ ನೀಡುವುದಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಅವಕಾಶ ಇದೆ. ನಿರ್ಬಂಧ ವಿಧಿಸಿ ಅವರಿಗೆ ಪಾದಯಾತ್ರೆಗೆ ಅವಕಾಶ ಕೊಡಲಾಗುತ್ತದೆ ಎಂದು ಬಿಜೆಪಿ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದರು.
ಉನ್ನತ ಮಟ್ಟದ ತನಿಖೆಗೆ ಆದೇಶ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶ ಕುಸಿಯುವ ಭೀತಿ ಎದುರಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಭೂ ಮಾಫಿಯಾದ ವಾಸನೆ ಇದೆ. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುತ್ತಿದ್ದೇನೆ ಎಂದಿದ್ದಾರೆ.
ಕೆತ್ತಿಕಲ್ ನಲ್ಲಿ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡು ಬಂದಿದೆ. ಇಲ್ಲಿ ಗುಡ್ಡ ಅಪಾಯಕಾರಿಯಾಗಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮುನ್ಸೂಚನೆ ನೀಡಿತ್ತು. ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಗಣಿ ಭೂ ವಿಜ್ಞಾನ ಇಲಾಖೆ ಮಣ್ಣು ಅಗೆಯಲು ಅವಕಾಶ ಯಾಕೆ ನೀಡಿದೆ ಎಂದು ವರದಿ ಕೇಳುತ್ತೇನೆ ಎಂದರು.

Previous articleಮಳೆ ನಿಲ್ಲಿಸುವಂತೆ ಕಳಸೇಶ್ವರ ಸ್ವಾಮಿಗೆ ಭಕ್ತರ ಮನವಿ
Next articleಕೆತ್ತಿಕಲ್ ಗುಡ್ಡ ಪ್ರದೇಶ: ನೋಡಿದರೆ ಭಯ ಆಗುತ್ತದೆ…