ಬರ ಪರಿಹಾರ: ಸಮಿತಿ ಶಿಫಾರಸು ಹಾಜರುಪಡಿಸಲು ಸುಪ್ರೀಂ ಸೂಚನೆ

0
6

ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮೇ ೬ಕ್ಕೆ ಮುಂದೂಡಿದೆ.
ನಾವು ಕೇಳಿದ್ದು ೧೮ ಸಾವಿರ ಕೋಟಿ ರೂಪಾಯಿ ಪರಿಹಾರ ಆದರೆ, ಕೇಂದ್ರ ಸರ್ಕಾರ ಕೇವಲ ೩,೪೫೬ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಪರಿಹಾರ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು ಆದರೆ, ಇಷ್ಟು ಕನಿಷ್ಠ ಹಣ ಬಿಡುಗಡೆ ಮಾಡಿರುವುದು ಅಸಮಂಜಸವಾಗಿದೆ. ಕೂಡಲೇ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಕೇಂದ್ರಕ್ಕೆ ಆದೇಶ ನೀಡುವಂತೆ ಕರ್ನಾಟಕ ಪರ ವಕೀಲರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.
ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವೆಂಕಟರಮಣಿ, ಅಗತ್ಯ ಬರ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದು ಕೂಡ ಸಮಿತಿಯ ಶಿಫಾರಸ್ಸಿನಂತೆಯೇ ಮಾಡಲಾಗಿದೆ ಎಂದು ವಾದಿಸಿದರು. ವಾದ, ಪ್ರತಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ಬರ ಪರಿಹಾರ ವೀಕ್ಷಣೆಯ ಸಮಿತಿ ಮಾಡಿರುವ ಶಿಫಾರಸುಗಳನ್ನು ಮುಂದಿನವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ, ಪ್ರಕರಣವನ್ನು ಮುಂದೂಡಿದೆ.
೨೦೨೩ರಲ್ಲಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಭೀಕರ ಬರಗಾಲ ಬಂದಿತ್ತು. ಈ ಹಿನ್ನೆಲೆ ಎನ್‌ಡಿಆರ್‌ಎಫ್‌ನಿಂದ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮುಂದೆ ೧೮,೧೭೪ ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಬೇಡಿಕೆ ಇಟ್ಟಿತ್ತು. ಕರ್ನಾಟಕದ ಮನವಿ ಮೇರೆಗೆ ಅಧ್ಯಯನ ನಡೆಸಿ ಕೇಂದ್ರದ ತಂಡವೂ ವರದಿ ಸಲ್ಲಿಸಿತ್ತು. ಆದರೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿರಲಿಲ್ಲ.
ಬರ ಪರಿಹಾರ ವಿಳಂಬದ ಕಾರಣ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿ ಬರ ಪರಿಹಾರ ಬಿಡುಗಡೆಯ ಕುರಿತು ಒಂದು ವಾರದೊಳಗೆ ನಿರ್ಧರಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ ಏ.೨೭ ರಂದು ೩,೪೫೪ ಕೋಟಿ ರೂ. ಬರ ಪರಿಹಾರವನ್ನು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಇದು ಕಡಿಮೆ ಮೊತ್ತ ಎಂದು ಹೇಳಿ ರಾಜ್ಯ ಸರ್ಕಾರ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದೆ.

Previous articleಬಿಜೆಪಿ-ಆರೆಸ್ಸೆಸ್‌ನಿಂದ ಸಂವಿಧಾನ ಬದಲಾವಣೆ
Next articleಕರ್ನಾಟಕದ ಅವಸ್ಥೆ