ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಒಂದು ಅಪವಿತ್ರ ಮೈತ್ರಿ

0
23
ಸಿದ್ದರಾಮಯ್ಯ

ಚಿತ್ರದುರ್ಗ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಒಂದು ಅಪವಿತ್ರ ಮೈತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ‌ ಮಾಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಬಬ್ಬೂರಿಗೆ ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭಕ್ಕೆ ತೆರಳುವ ಮೊದಲು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿನಿಂದಲೂ ನಾವು ಜಾತ್ಯತೀತರು ಎಂದು ಹೇಳುತ್ತ ಬಂದಿರುವ ಜೆಡಿಎಸ್ ರಾಜ್ಯದಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಪಕ್ಷದ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ, ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದರು.
ಅಬಕಾರಿ ಸಚಿವರು ರಾಜ್ಯದಲ್ಲಿ ೧೦೦೦ ಮಧ್ಯದಂಗಡಿಗಳನ್ನು ತೆರೆಯುವ ಹೇಳಿಕೆ ಕುರಿತು ಪ್ರತಿಕ್ರೀಯೆ ನೀಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಈಗಿರುವ ಮಧ್ಯದಂಗಡಿಗಳ ಹೊರತಾಗಿ ಹೊಸದಾಗಿ ಯಾವುದೇ ಮಧ್ಯದಂಗಡಿಗಳನ್ನು ತೆರೆಯುವುದಿಲ್ಲ ಎಂದರು.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿರುವುದು ಬಿಜೆಪಿ. ಅವರಿಗೆ ರಾಜ್ಯದ ಆರ್ಥಿಕತೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳಿಗೆ ಹಣ ಕೊರತೆ ಇಲ್ಲ. ಅದೇ ರೀತಿ ನಮ್ಮ ಪಕ್ಷ ನೀಡಿರುವ 5 ಗ್ಯಾರೆಂಟಿಗಳಿಗೂ ಹಣದ ಕೊರತೆ ಇಲ್ಲ. ಆದರೆ ನಮ್ಮ ಶಾಸಕರು ಹೆಚ್ವಿನ ಅನುಧಾನ ಬೇಕು ಎಂದು ಕೇಳುತ್ತಿದ್ದಾರೆ ಅಷ್ಟೇ. ಅದನ್ನು ಕೂಡ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಶಿವಮೊಗ್ಗಕ್ಕೆ ಬಿಜೆಪಿಯವರು ಸತ್ಯ ಶೋಧನೆ ಮಾಡಲು ಹೋಗಿದ್ದಾರೆ. ಸತ್ಯ ಶೋಧನೆ ಎಂದರೆ ಏನು? ಯಾವುದರ ಬಗ್ಗೆ ಸತ್ಯ ಶೋಧನೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಮುಸ್ಲೀಂ ಸಮುದಾಯ ಮೆರವಣಿಗೆ ಮಾಡುವಾಗ ಯಾರೋ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಅದನ್ನು ಯಾರು ಎಸೆದಿದ್ದಾರೆ ಎಂಬುದನ್ನು ಪತ್ತೇ ಹಚ್ಚುವಂತೆ ಪೊಲೀಸರಿಗೆ ಸೂಚನೆ ನೀಡಿದ್ದು, ತಪ್ಪು ಮಾಡಿದವರು ಯಾವ ಜಾತಿಯವರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೆನೆ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.
ರಾಜ್ಯದ 236 ತಾಲ್ಲೂಕುಗಳಲ್ಲಿ 195 ಬರಗಾಲ ಎಂದು ಘೋಷಣೆ ಮಾಡಲಾಗಿದೆ. ರಾಜ್ಯದ 42 ಲಕ್ಷ ಎಕ್ಟೆರ್ ಪ್ರದೇಶದಲ್ಲಿ ಸುಮಾರು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಪರಿಹಾರ ಕೇಳಿದ್ದೆವೆ. ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ‌ ನೀಡಿದ್ದು, 11 ಜಿಲ್ಲೆಗಳಿಗೆ ಭೇಟಿ ಮಾಡಿ, ವರದಿ ನೀಡುತ್ತಾರೆ. ಅದರ ಆಧಾರದ ಮೇಲೆ ಪರಿಹಾರ ನೀಡುತ್ತಾರೆ. ಕೇಂದ್ರ ಸರ್ಕಾರದ ಮಾನದಂಡದಂತೆ 4960 ಕೋಟಿ ಬೆಳೆ ಹಾನಿ ಪರಿಹಾರ ನೀಡುವಂತೆ ಕೇಳಿದ್ದು, ಅದನ್ನು ನೀಡುವ ಭರವಸೆ ಇದೆ ಎಂದು ಹೇಳಿದರು.
ಅಪ್ಪರ್ ಭದ್ರ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿ 5300 ಕೋಟಿ ಬಜೆಟ್ ನಲ್ಲಿ ನೀಡಿದ್ದಾರೆ ಅದರಂತೆ ನಮಗೆ ನೀಡಬೇಕು. ಈ ಬಗ್ಗೆ ನಾವು ಪತ್ರ ಬರೆದಿದ್ದು, ಶೀಘ್ರವೇ 5300 ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೆವೆ ಎಂದರು.

Previous articleಮೊಬೈಲ್ ಅತಿ ಬಳಕೆ ಅನಾಹುತಕ್ಕೆ ಕಾರಣ
Next articleKSRTC ಪ್ರಯಾಣಿಕರ ಸೇವೆಗೆ ಸಿದ್ದವಾದ ‘ಪಲ್ಲಕ್ಕಿ’