ತಾರತಮ್ಯ ಧೋರಣೆ ಅನುಸರಿಸುತ್ತಿರುವರೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ
ಬೆಂಗಳೂರು: ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಗೆ ಮಾಡಿ ಜಯನಗರ ವಿಧಾನಸಭಾ ಕ್ಷೇತ್ರ ಕೈಬಿಟ್ಟಿರುವುದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಬೆಂಗಳೂರಿನ ಅಭಿವೃದ್ಧಿಗೆ ನಿಗದಿಯಾಗಿದ್ದ ಆಯವ್ಯಯದಲ್ಲಿನ ಪ್ರಸ್ತುತ ಸಾಲಿನ ಅನುದಾನದಲ್ಲಿ ಬೆಂಗಳೂರಿನ 27 ಕ್ಷೇತ್ರಗಳಿಗೆ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರು ತಮ್ಮ ವಿವೇಚನೆಯಲ್ಲಿ ತಲಾ 10 ಕೋಟಿ ರೂ ಗಳ ಅನುದಾನ ಬಿಡುಗಡೆಗೆ ಸೂಚಿಸಿರುವ ನಡೆ ಸ್ವಾಗತಾರ್ಹ. ಆದರೆ ಜಯನಗರ ವಿಧಾನಸಭಾ ಕ್ಷೇತ್ರವನ್ನು ಕೈಬಿಟ್ಟಿರುವುದು ಬಿಜೆಪಿ ಶಾಸಕರಿರುವ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿಯೇ ತಾರತಮ್ಯ ಧೋರಣೆ ಅನುಸರಿಸುತ್ತಿರುವರೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಸುರಿದ ರಣ ಮಳೆಯ ಅವಾಂತರ ಸರಿಪಡಿಸಿ, ಗುಂಡಿಬಿದ್ದ ರಸ್ತೆಗಳನ್ನು ಮುಚ್ಚಿ, ಮೂಲ ಸೌಕರ್ಯ ಒದಗಿಸುವ ಸವಾಲು ಎದುರಿಸಲು ಪಕ್ಷಾತೀತವಾಗಿ ಶ್ರಮಿಸಬೇಕಿರುವ ಹೊತ್ತಲ್ಲಿ ರಾಜಕೀಯ ಮಾಡುವುದು ಶೋಭೆಯಲ್ಲ, ಈ ಕೂಡಲೇ ಅನ್ಯ ಕ್ಷೇತ್ರಗಳಿಗೆ ಬಿಡುಗಡೆಯಾದಂತೆ ಜಯನಗರ ಕ್ಷೇತ್ರಕ್ಕೂ ನಿಗದಿತ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುವೆ ಎಂದಿದ್ದಾರೆ.