ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಮಾಸ್ಟರ್ ಮೈಂಡ್ ಹಸೀಮ್ ಮೂಸಾನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.
ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರ ಹತ್ಯೆಯಾಗಿದ್ದು, ಅದರಲ್ಲಿ ಹಸೀಮ್ ಮೂಸಾ ಸಹ ಒಬ್ಬ.
ಉಗ್ರರು ಅಡಗಿರುವ ಮಾಹಿತಿಯನ್ನು ಗುಪ್ತಚರ ಇಲಾಖೆಯಿಂದ ಪಡೆದಿದ್ದ ಭಾರತೀಯ ಸೇನೆ ಆಪರೇಷನ್ ಮಹಾದೇವ್ ಹೆಸರಿನಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ.
ಮೂವರು ಉಗ್ರರ ಪೈಕಿ ಹಸೀಮ್ ಮೂಸಾ ಸಹ ಒಬ್ಬ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈತನ ಬಗ್ಗೆ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.
ಸೇನಾ ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಪಹಲ್ಗಾಮ್ ಭಯೋತ್ಪಾದಕರ ದಾಳಿ ಬಳಿಕ ಹಸೀಮ್ ಮೂಸಾ ಬಂಧನಕ್ಕೆ ಹುಡುಕಾಟವನ್ನು ನಡೆಸುತ್ತಿದ್ದವು. ಏಪ್ರಿಲ್‌ನಲ್ಲಿ ನಡೆದಿದ್ದ ಪಹಲ್ಗಾಮ್ ದಾಳಿಯಲ್ಲಿ 25ಕ್ಕೂ ಅಧಿಕ ಪ್ರವಾಸಿಗರು ಮೃತಪಟ್ಟಿದ್ದರು.
ಹಸೀಮ್ ಮೂಸಾನನ್ನು ಸುಲೇಮಾನ್ ಶಾ ಎಂದು ಸಹ ಕರೆಯಲಾಗುತ್ತದೆ. ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಸಂಪೂರ್ಣ ಹಳಸಿ ಹೋಗಿದೆ. ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ಮಾಡುವ ಮೂಲಕ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿತ್ತು.
ಪಿ.ಚಿದಂಬರಂ ಪ್ರಶ್ನೆ: ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪಹಲ್ಗಾಮ್ ದಾಳಿ ಬಗ್ಗೆ ಮಾತನಾಡಿದ್ದಾರೆ. ಸಂಸತ್‌ನಲ್ಲಿ ಪಹಲ್ಗಾಮ್ ದಾಳಿ ಕುರಿತು ಸೋಮವಾರ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕ ಆ ಕುರಿತು ಮಾತನಾಡಿದ್ದಾರೆ.
ದಿ ಕ್ವಿಂಟ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಪಹಲ್ಗಾಮ್ ದಾಳಿಯಲ್ಲಿ ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆ ಮಾಡಿದವರು ಪಾಕಿಸ್ತಾನದಿಂದ ಬಂದರು ಎಂದು ಏಕೆ ಅಂದುಕೊಳ್ಳುತ್ತೀರಿ?. ಅವರು ಈ ನೆಲದ ಭಯೋತ್ಪಾದಕರು ಆಗಿರಬಹುದು ಏಕೆಂದರೆ ಇಂದಿನವರೆಗೂ ಕೃತ್ಯ ನಡೆಸಿದವರ ಯಾವ ಸುಳಿವೂ ಪತ್ತೆಯಾಗಿಲ್ಲ” ಎಂದು ಹೇಳಿದ್ದಾರೆ.
“ಅವರು ಪಾಕಿಸ್ತಾನದಿಂದ ಬಂದರು ಎಂಬುದಕ್ಕೆ ಸಾಕ್ಷಿಗಳೇ ಇಲ್ಲ. ಭಯೋತ್ಪಾದಕರನ್ನು ಗುರುತಿಸಿದ್ದೀರಾ?. ಅವರು ಎಲ್ಲಿಂದ ಬಂದರು?. ಅವರು ಈ ನೆಲದ ಭಯೋತ್ಪಾದಕರೇ ಆಗಿರುವ ಸಾಧ್ಯತೆಗಳಿವೆ” ಎಂದು ಚಿದಂಬರಂ ಮಾತನಾಡಿದ್ದಾರೆ.
ಪಿ.ಚಿದಂಬರಂ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ‘ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಉತ್ಸುಕವಾಗಿದೆ’ ಎಂದು ಟೀಕಿಸಿದ್ದಾರೆ.
‘ಪಾಕಿಸ್ತಾನದ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಯಾವಾಗ ಭಾರತೀಯ ಸೇನೆ ಕಾರ್ಯಾಚರಣೆ ಮಾಡುತ್ತದೆಯೋ ಆಗ ಕಾಂಗ್ರೆಸ್ ನಾಯಕರು ಇಸ್ಲಾಮಾಬಾದ್ ಪರ ವಕೀಲರಂತೆ ಭಾರತವನ್ನು ಟೀಕಿಸುತ್ತಾರೆ’ ಎಂದು ಆರೋಪ ಮಾಡಿದ್ದಾರೆ.