ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2022ರಲ್ಲಿ ಅವರು ಉಪ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದರು.
74 ವರ್ಷದ ಜಗದೀಪ್ ಧನಕರ್ ಭಾರತದ 14ನೇ ಉಪ ರಾಷ್ಟ್ರಪತಿ. ಸೋಮವಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆ.
ಆರೋಗ್ಯದ ಕಾರಣವನ್ನು ನೀಡಿರುವ ಜಗದೀಪ್ ಧನಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಜಗದೀಪ್ ಧನಕರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯರ ಸಲಹೆ ಮೇರೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಗದೀಪ್ ಧನಕರ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಅವಧಿಯಲ್ಲಿ ಭಾರತ ಗಮನಾರ್ಹ ಆರ್ಥಿಕ ಪ್ರಗತಿ ಸಾಧಿಸಿದ್ದು, ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.
ತಮ್ಮ ಅವಧಿಯಲ್ಲಿ ಸಂಪೂರ್ಣ ಸಹಕಾರವನ್ನು ನೀಡಿದ ಪ್ರಧಾನಿಗಳು, ಸಚಿವ ಸಂಪುಟಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಮಂತ್ರಿಗಳ ಸಹಕಾರ, ಬೆಂಬಲ ಅಮೂಲ್ಯವಾದದ್ದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಜಗದೀಪ್ ಧನಕರ್ ಪರಿಚಯ: ಜಗದೀಪ್ ಧನಕರ್ ಅವರು ರಾಜಸ್ಥಾನದ ಜುಂಜುನು ಜಿಲ್ಲೆಯ ಕಿತಾನ ಗ್ರಾಮದಲ್ಲಿ 18 ಮೇ, 1951ರಂದು ಜನಿಸಿದರು. ತಂದೆ ದಿ. ಗೋಕಲ್ ಚಂದ್, ತಾಯಿ ದಿ. ಕೇಸರಿ ದೇವಿ.
ಜಗದೀಪ್ ಧನಕರ್ ಅವರು 1 ರಿಂದ 5ನೇ ತರಗತಿ ತನಕ ಕಿತಾನಾ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದರು. 6ನೇ ತರಗತಿಗಾಗಿ ಅವರು ಸುಮಾರು 5 ಕಿ.ಮೀ. ದೂರದಲ್ಲಿರುವ ಘರ್ಧಾನಾದ ಸರ್ಕಾರಿ ಮಾಧ್ಯಮಿಕ ಶಾಲೆಗೆ ಸೇರಿದರು. ಇತರ ಹಳ್ಳಿಯ ವಿದ್ಯಾರ್ಥಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದರು.
1962ರಲ್ಲಿ ಚಿತ್ತೋರ್‌ಗಢ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪೂರ್ಣ ಮೆರಿಟ್ ವಿದ್ಯಾರ್ಥಿ ವೇತನದ ಮೇಲೆ ಶಾಲೆಯಲ್ಲಿ 5ನೇ ತರಗತಿಗೆ ಪ್ರವೇಶ ಪಡೆದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಗುರುತಿಸಲ್ಪಟ್ಟ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಯನ್ನು ತೆಗೆದುಕೊಂಡ ನಂತರ ಚಿತ್ತೋರ್‌ಗಢ ಸೈನಿಕ ಶಾಲೆಯಿಂದ ಉತ್ತೀರ್ಣಗೊಂಡರು.
ರಾಜಸ್ಥಾನ ವಿವಿಯ ಜೈಪುರದ ಮಹಾರಾಜ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದರು. ರಾಜಸ್ಥಾನ ವಿವಿಯಿಂದ 1978-1979ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದರು. ರಾಜಸ್ಥಾನ ಬಾರ್ ಕೌನ್ಸಿಲ್‌ಗೆ 10/11/1979ರಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡರು.
1990ರಿಂದ ರಾಜಸ್ಥಾನ ಹೈಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡರು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು. ಉಕ್ಕು, ಕಲ್ಲಿದ್ದಲು, ಗಣಿಗಾರಿಕೆ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.
ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ವಿವಿಧ ಪ್ರಕರಣಗಳ ಪರವಾಗಿ ವಾದ ಮಂಡಿಸಿದ್ದಾರೆ. ಜುಲೈ 30, 2019ರಂದು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ತನಕ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
2019ರಲ್ಲಿ ಕೇಂದ್ರ ಸರ್ಕಾರ ಮಾಜಿ ಸಂಸದ ಮತ್ತು ಸುಪ್ರೀಂಕೋರ್ಟ್‌ನ ಖ್ಯಾತ ವಕೀಲರಾಗಿದ್ದ ಜಗದೀಪ್ ಧನ್‌ಕರ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕ ಮಾಡಿತು. 2022ರಲ್ಲಿ ಅವರು ಭಾರತದ ಉಪ ರಾಷ್ಟ್ರಪತಿಯಾಗಿ ನೇಮಕಗೊಂಡರು.
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಜಗದೀಪ್ ಧನ್‌ಕರ್ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಯಾಗಿದ್ದರು. ವಿರೋಧ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಶೇ 74ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು. ಉಪ ರಾಷ್ಟ್ರಪತಿಯಾಗಿ ಆಯ್ಕೆಗೊಂಡರು.