ನವದೆಹಲಿ: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ದೇಶದಲ್ಲಿ ಈ ಮಾದರಿ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಈ ರೈಲಿನ ಟಿಕೆಟ್ ಬುಕ್ ಮಾಡುವ ನಿಯಮದಲ್ಲಿ ಪ್ರಾಯೋಗಿಕವಾಗಿ ಕೆಲವು ಬದಲಾವಣೆ ಮಾಡಲಾಗಿದೆ. ದಕ್ಷಿಣ ರೈಲ್ವೆ ಈ ಬದಲಾವಣೆಯನ್ನು ತಂದಿದ್ದು, ಜುಲೈ 17ರಿಂದಲೇ ಇದು ಜಾರಿಗೆ ಬಂದಿದೆ.
ದಕ್ಷಿಣ ರೈಲ್ವೆ ರೈಲು ಹೊರಡುವ 15 ನಿಮಿಷ ಮೊದಲು ಸಹ ವಂದೇ ಭಾರತ್ ರೈಲಿಗೆ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ನೀಡಿದೆ. ವಲಯದ ವ್ಯಾಪ್ತಿಯಲ್ಲಿ ಸಂಚಾರ ನಡೆಸುವ 8 ವಂದೇ ಭಾರತ್ ರೈಲುಗಳಲ್ಲಿ ಈ ಮಾದರಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.
ಮೊದಲು ವಂದೇ ಭಾರತ್ ಸೀಟುಗಳು ಖಾಲಿ ಇದ್ದರೆ ರೈಲು ಹಾಗೆಯೇ ಸಂಚಾರವನ್ನು ನಡೆಸುತ್ತಿತ್ತು. ಆದರೆ ಈಗ ಖಾಲಿ ಸೀಟುಗಳ ಮಾಹಿತಿಯನ್ನು ಕರೆಂಟ್ ಬುಕ್ಕಿಂಗ್ ವ್ಯವಸ್ಥೆಗೆ ತರಲಾಗಿದೆ. ಆದ್ದರಿಂದ ಒಂದು ವೇಳೆ ಸೀಟುಗಳು ಖಾಲಿ ಇದ್ದರೆ ರೈಲು ನಿಲ್ದಾಣದಿಂದ ಹೊರಡುವ 15 ನಿಮಿಷ ಮೊದಲು ಬುಕ್ ಮಾಡಿದರೂ ಸೀಟು ಸಿಗಲಿದೆ.
ಯಾವ-ಯಾವ ರೈಲುಗಳು?: ದಕ್ಷಿಣ ರೈಲ್ವೆಯ ಮಾಹಿತಿ ಪ್ರಕಾರ ಈ ಸೌಲಭ್ಯ ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ (ರೈಲು ನಂಬರ್ 20631) ಮತ್ತು ತಿರುವನಂತಪುರಂ ಸೆಂಟ್ರಲ್-ಮಂಗಳೂರು ವಂದೇ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20632)ನಲ್ಲಿ ಲಭ್ಯವಿದೆ.
ಚೆನ್ನ-ಇಗ್ಮೋರ್-ನಾಗರಕೋಯಿಲ್, ಚೆನ್ನೈ ಸೆಂಟ್ರಲ್-ವಿಜಯವಾಡ, ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್, ಮಂಗಳೂರು ಸೆಂಟ್ರಲ್-ಮಡಗಾಂವ್, ಮಧುರೈ-ಬೆಂಗಳೂರು ಕಂಟೋನ್ಮೆಂಟ್ ರೈಲುಗಳಲ್ಲಿ ಈ ಸೇವೆ ಇದೆ.
ಈ ಮಾದರಿ ವ್ಯವಸ್ಥೆಯಿಂದಾಗಿ ರೈಲಿನ ಸೀಟುಗಳು ಭರ್ತಿಯಾಗುತ್ತದೆ. ಅಂತಿಮ ಹಂತದಲ್ಲಿ ರೈಲು ಪ್ರಯಾಣದ ಯೋಜನೆ ರೂಪಿಸಿದರೆ ಸೀಟುಗಳು ಸಿಗಲು ಸಹ ಅನೂಕೂಲವಾಗಲಿದ್ದು, ಪ್ರಯಾಣಿಕರಿಗೆ ಸಹಾಯಕವಾಗಲಿದೆ.
ಸಾಮಾನ್ಯ ರೈಲಿನಲ್ಲಿ ಸಂಚಾರ ನಡೆಸಲು ಬಯಸಿದ ಜನರು ಸಹ ವಂದೇ ಭಾರತ್‌ನಲ್ಲಿ ಸೀಟುಗಳು ಖಾಲಿ ಇದ್ದರೆ ಅದನ್ನು ಬುಕ್ ಮಾಡಿಕೊಂಡು ಸಂಚಾರವನ್ನು ನಡೆಸಬಹುದು. ಈ ಸೇವೆಗೆ ಪ್ರಯಾಣಿಕರು ಹೇಗೆ ಪ್ರತಿಕ್ರಿಯೆ ನೀಡತ್ತಾರೆ? ಎಂದು ಕಾದು ನೋಡಬೇಕಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದರಗಳು ಹೆಚ್ಚು ಎಂದು ಆರೋಪವಿದೆ. ಆದರೆ ತಿರುವನಂತಪುರಂ-ಮಂಗಳೂರು ಸೇರಿದಂತೆ ವಿವಿಧ ಮಾರ್ಗದ ರೈಲುಗಳು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿರುತ್ತವೆ. ಅದಕ್ಕಾಗಿಯೇ ಈ ರೈಲಿನ 8 ಬೋಗಿಯನ್ನು ಈಗ 16 ಬೋಗಿಯಾಗಿ ಪರಿವರ್ತನೆ ಮಾಡಲಾಗಿದೆ.
ಎರಡು ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸಲು ಸೀಮಿತ ನಿಲುಗಡೆಯೊಂದಿಗೆ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತದೆ. ಪ್ರಯಾಣದ ಅವಧಿ ಕಡಿಮೆಯಾದ ಕಾರಣ ಸಮಯ ಉಳಿತಾಯವಾಗುತ್ತದೆ ಎಂದು ಹಲವು ಜನರು ಈ ಮಾದರಿ ರೈಲುಗಳನ್ನು ಬಳಕೆ ಮಾಡುತ್ತಿದ್ದಾರೆ.
ವಂದೇ ಭಾರತ್ ಬಿಳಿ ಮತ್ತು ಕೇಸರಿ ಬಣ್ಣದ ರೈಲುಗಳ ಸಂಚಾರ ಯಶಸ್ವಿಯಾದ ಬಳಿಕ ದೂರದ ನಗರಗಳ ಮೇಲೆ ಭಾರತೀಯ ರೈಲ್ವೆ ಗಮನ ಹರಿಸಿದೆ. ಇದಕ್ಕಾಗಿ ಐಷಾರಾಮಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳನ್ನು ಓಡಿಸಲಿದೆ. ಈಗಾಗಲೇ ಈ ಮಾದರಿ ರೈಲುಗಳು ತಯಾರಾಗಿದ್ದು, ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿದೆ.