ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ಡೀಸೆಲ್ ಬದಲು ನೀರು

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಬೆಂಗಾವಲು ಪಡೆಯ 19 ವಾಹನಗಳು ಡೀಸೆಲ್ ತುಂಬಿಸಿದ ನಂತರ ಒಂದರ ನಂತರ ಒಂದು ಕೆಟ್ಟು ನಿಂತ ಘಟನೆ ನಡೆದಿದೆ.
ಗುರುವಾರ ಸಂಜೆ ರತ್ಲಂಗೆ ತೆರಳಿದ್ದ ಮೋಹನ್ ಯಾದವ್ ಅವರ ಬೆಂಗಾವಲು ಪಡೆಯ 19 ವಾಹನಗಳಿಗೆ ಪೆಟ್ರೋಲ್ ಪಂಪ್‌ನಿಂದ ಡೀಸೆಲ್ ತುಂಬಿಸಲಾಗಿತ್ತು, ಸ್ವಲ್ಪ ದೂರ ಕ್ರಮಿಸಿದ ನಂತರ, ಎಲ್ಲಾ ವಾಹನಗಳು ಇದ್ದಕ್ಕಿದ್ದಂತೆ ನಿಂತವು. ಅವುಗಳನ್ನು ತಳ್ಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಬೇಕಾಯಿತು. ಡೀಸೆಲ್‌ನಲ್ಲಿ ಕಲಬೆರಕೆಯಿಂದಾಗಿ ಮುಖ್ಯಮಂತ್ರಿಯವರ ಬೆಂಗಾವಲಿನ 19 ವಾಹನಗಳನ್ನು ನಿಲ್ಲಿಸಿ ಅವುಗಳನ್ನು ಹೊರಗೆ ಕರೆದೊಯ್ಯಲಾಯಿತು ಎಂದು ಕಾಂಗ್ರೆಸ್ ನಾಯಕ ಕುನಾಲ್ ಚೌಧರಿ ಹೇಳಿದ್ದಾರೆ. ನಂತರ ಸಂಬಂಧಪಟ್ಟ ಪೆಟ್ರೋಲ್ ಪಂಪ್‌ ಸೀಜ್‌ ಮಾಡಲಾಯಿತು. ಭ್ರಷ್ಟಾಚಾರವು ಮುಖ್ಯಮಂತ್ರಿಯನ್ನೂ ಬಿಟ್ಟಿಲ್ಲ ಎಂದು ಚೌಧರಿ ವ್ಯಂಗ್ಯವಾಡಿದ್ದಾರೆ.