ರಬಕವಿ-ಬನಹಟ್ಟಿ: ನಗರಸಭೆಯ ಮೊದಲನೇಯ ಅವಧಿಯ ಅಧಿಕಾರವಧಿ ಮುಕ್ತಾಯಗೊಂಡಿದ್ದು, 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಧಿಯು ಮೇ 9ಕ್ಕೆ ಅವಧಿ ಪೂರ್ಣಗೊಂಡಿದೆ.
ರಬಕವಿ-ಬನಹಟ್ಟಿ ನಗರಸಭೆಯಲ್ಲಿ 31 ಸದಸ್ಯರ ಪೈಕಿ ಬಿಜೆಪಿ-24, ಕಾಂಗ್ರೆಸ್-5 ಹಾಗು ಪಕ್ಷೇತರರು-3 ಸ್ಥಾನಗಳನ್ನು ಗೆದ್ದಿವೆ. ಬದಲಾದ ಸನ್ನಿವೇಶದಲ್ಲಿ ಬಿಜೆಪಿಯು ಬಹುಮತವಿದ್ದರೂ ಪಕ್ಷೇತರ ಅಭ್ಯರ್ಥಿಗಳಾದ ಇಬ್ಬರೂ ಸದಸ್ಯರಾದ ಗೌರಿ ರಮೇಶ ಮಿಳ್ಳಿ ಹಾಗು ಶೋಭಾ ಪರಶುರಾಮ ಕೊಕ್ಕನವರ ಬಿಜೆಪಿ ಬೆಂಬಲಿಸುವದರೊಂದಿಗೆ 26 ಸದಸ್ಯರ ಬಲ ಹೊಂದುವಲ್ಲಿ ಕಾರಣವಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ 16 ಸ್ಥಾನಗಳು ಬರಬೇಕಿವೆ. ಮೊದಲ ಅವಧಿಯಲ್ಲಿ ಬಿಜೆಪಿಯಿಂದ ನಿರಾಯಾಸವಾಗಿ ಆಡಳಿತ ನಡೆಸುವಲ್ಲಿ ಮೊದಲ 15 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಶ್ರೀಶೈಲ ಬೀಳಗಿ, ಉಪಾಧ್ಯಕ್ಷರಾಗಿ ಬಾಳವ್ವ ಕಾಖಂಡಕಿ ಹಾಗು ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಂಜಯ ತೆಗ್ಗಿ, ಉಪಾಧ್ಯಕ್ಷರಾಗಿ ವಿದ್ಯಾ ಪ್ರವಿಣ ದಭಾಡಿ ಆಡಳಿತ ನಡೆಸಿದ್ದರು.
ಪ್ರಸಕ್ತ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಾವ ಸಮುದಾಯಗಳಿಗೆ ಒಲಿಯಲಿದೆ ಎಂದು ಆಕಾಂಕ್ಷಿಗಳು ಎದುರ ನೋಡುತ್ತಿದ್ದಾರೆ.
ನಗರಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು, ಯಾರ ಪಾಲಿಗೆ ಅದೃಷ್ಟಲಕ್ಷ್ಮೀ ಒಲಿಯಲಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗೆ ಗ್ರಾಸವಾಗಿದೆ.
ಮೇ 9ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅವಧಿ ಮುಗಿದಿರುವ ಕಾರಣ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಆಡಳಿತಾಧಿಕಾರಿಯಾಗಿ ನೇಮಕ ಹೊಂದಿದ್ದಾರೆ.
ಸರ್ಕಾರ ಮಟ್ಟದಲ್ಲಿ ಈಗ ಪ್ರಕ್ರಿಯೆ ಪ್ರಾರಂಭವಾಗಿದೆ. ಕಾಂಗ್ರೆಸ್ ಸರ್ಕಾರವಿರುವುದರಿಂದ ಯಾವ ಮೀಸಲಾತಿ ಬಂದರೆ ಅನುಕೂಲವಾಗುತ್ತದೆ ಎಂಬ ಚಿಂತನೆಗಳು ನಡೆಯುತ್ತಿದ್ದರೂ ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಮಾತ್ರ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಎಲ್ಲ ಮೀಸಲಾತಿ ಹೊಂದಿದ ಸದಸ್ಯರಿರುವ ಕಾರಣ ರಾಜಕೀಯ ಪ್ರಯೋಗದ ಪರಿಣಾಮ ಬೀಳದೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಸಾರ್ವಜನಿಕ ವಲಯದಲ್ಲಿ ಹಾಗು ಬಿಜೆಪಿ ಸದಸ್ಯರಲ್ಲಿ ಮಾತ್ರ ಯಾವ ಮೀಸಲಾತಿ ಯೋಗ ಕೂಡಿ ಬರಲಿದೆ ಎಂಬ ಕುತೂಹಲ ಮಾತ್ರ ಜೋರಾಗಿದೆ.