ಮಹಿಷವಾಡಗಿ ಸೇತುವೆ ವಿಳಂಬಕ್ಕೆ ಆಕ್ರೋಶ

0
5

ಬಾಗಲಕೋಟೆ: ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ರಬಕವಿ-ಬನಹಟ್ಟಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವದನ್ನು ತೇರದಾಳ ಶಾಸಕಸಿದ್ದು ಸವದಿ ಹಾಗೂ ರಬಕವಿ-ಬನಹಟ್ಟಿ ಪಟ್ಟಣದ ನೂರಾರು ಮುಖಂಡರು ವೀಕ್ಷಣೆ ನಡೆಸಿ ಆಕ್ರೋಶ ಹೊರಹಾಕಿದರು.
2018ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು 30 ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನಸ್ಟ್ರಕ್ಷನ್ಸ್ ಕಂಪನಿಗೆ ನೀಡಿತ್ತು.
ಕಳೆದ ಆರು ವರ್ಷಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಕಾಮಗಾರಿ ನಡೆದಿದೆ.ಇದಕ್ಕೆ ಪೂರಕವಾಗಿ 2021 ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು 50 ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗೂ ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿದ್ದರೂ ಕಾಮಗಾರಿ ನಡೆಯಲು ಯಾವುದೇ ಪ್ರಯೋಜನವಾಗಿಲ್ಲ.
ರವಿವಾರ ಮಧ್ಯಾಹ್ನ ಏಕಾಏಕಿ ನೂರಾರು ಜನರು ಕೃಷ್ಣಾ ನದಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಆಗಮಿಸಿ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಪರಿಹಾರವಿಲ್ಲ
ಸೇತುವೆ ನಿರ್ಮಾಣಕ್ಕಾಗಿ ಸುಮಾರು ನಾಲ್ಕೈದು ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಂಡಿರುವ ಸರ್ಕಾರದಿಂದ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಈ ಕುರಿತು ಕೃಷಿ ಭೂ ಮಾಲಿಕರು ಸೇತುವೆ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕ ಸಿದ್ದು ಸವದಿ ಮಾತನಾಡಿ, ಏಳು ವರ್ಷಗಳಿಂದ ನಡೆಯುತ್ತಿರುವ ಮಹಿಷವಾಡಗಿ ಸೇತುವೆ ನಿರ್ಮಾಣ ವಿಳಂಬವಾಗಿದೆ. ಕಳೆದ ಆರೇಳು ತಿಂಗಳಿಂದ ಶೀಘ್ರ ಕೆಲಸಕ್ಕೆ ಒತ್ತಡ ಹೇರಲಾಗುತ್ತಿದೆ. ಎಲ್ಲವನ್ನೂ ಸರಿದೂಗಿಸಿ ಕಾರ್ಯ ಸರಾಗವಾಗಬೇಕಿತ್ತು.
ಗುತ್ತಿಗೆದಾರನ ನಿರ್ಲಕ್ಷ್ಯದಿಂದ ವಿಳಂಬಕ್ಕೆ ಕಾರಣವಾಗಿದೆ. ಶೀಘ್ರವೇ ಸರ್ಕಾರಿ ಅಧಿಕಾರಿಗಳನ್ನು ಕರೆದು ಕಾಮಗಾರಿ ವೇಗಕ್ಕೆ ಚಾಲನೆ ನೀಡುವದಾಗಿ ನೆರೆದಿದ್ದ ಸಾರ್ವಜನಿಕರಿಗೆ ಭರವಸೆ ನೀಡಿದರು.
ಗುತ್ತಿಗೆದಾರನ ದರ್ಪ
ಎನ್‌ಸಿಸಿ ಕನಸ್ಟ್ರಕ್ಷನ್ಸ್ ಕಂಪನಿಯ ಗುತ್ತಿಗೆದಾರನು ಶಾಸಕರೊಂದಿಗೆ ಮಾತನಾಡಿದಾಗಲೂ ಸಕಾರಾತ್ಮಕ ಸ್ಪಂದನೆ ನೀಡದೆ ಕೆಲಸ ಮಾಡುವುದಾಗಿ ಅಷ್ಟೇ ಹೇಳುತ್ತಿದ್ದಾರೆ. ಇದರಿಂದ ಜನತೆ ಆಕ್ರೋಶಗೊಂಡಿದ್ದು, ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಅನಿವಾರ್ಯವಾಗಿದೆ ಎನ್ನುತ್ತಿದ್ದಾರೆ.

Previous articleಬಿಗಿ ಮಾಡಿದರೂ ನಿಲ್ಲದ ಅಕ್ರಮ ಅಕ್ಕಿ ಸಾಗಣೆ
Next articleಗಂಡ-ಹೆಂಡತಿ ಜಗಳ ಸಾವಿನೊಂದಿಗೆ ಅಂತ್ಯ