ಇಳಕಲ್: ಅಂಗಡಿ ಅಂಗಡಿ, ಮನೆ ಮನೆಗಳಿಗೆ ಪ್ರತಿನಿತ್ಯ ಹಣ ಸಂಗ್ರಹಣೆಗಾಗಿ ಓಡಾಡುವ ಪಿಗ್ಮಿ ಎಜೆಂಟನೊಬ್ಬ ತಮ್ಮ ಮಗಳ ಮದುವೆಯಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ ಮಾಡಿ ಮಾದರಿಯಾಗಿದ್ದಾನೆ.
ಇಳಕಲ್ ಅರ್ಬನ್ ಬ್ಯಾಂಕಿನಲ್ಲಿ ಕಳೆದ ಮೂರು ದಶಕಗಳ ಕಾಲದಿಂದ ಪಿಗ್ಮಿ ಸಂಗ್ರಹಣೆ ಕಾಯಕ ಮಾಡುತ್ತಿರುವ ಹುಸೇನಸಾಬ ನಬಿಸಾಬ ಶಿವನಗುತ್ತಿ ಎಂಬ ಪಿಗ್ಮಿ ಸಂಗ್ರಹಕಾರರು ಇಂತಹ ಸಾಹಸ ಮಾಡಿದ್ದು ನಗರದ ಜನಮಾನಸದಲ್ಲಿ ಸಂತಸ ತರುವ ಜೊತೆಗೆ ಗೌರವ ಮೂಡಿಸಿದೆ. ಹುಸೇನಸಾಬ ಪುತ್ರಿ ಅಪ್ಸರಾ ವಿವಾಹ ರಕ್ಕಸಗಿ ಗ್ರಾಮದ ಯಮನೂರಸಾಬ ಜೊತೆಗೆ ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದಾಗ ಹಿಂದು ಮುಸ್ಲಿಮ್ ಸಮಾಜದ ಹನ್ನೆರಡು ಜೋಡಿಗಳು ಸಹ ಸತಿಪತಿಗಳಾಗಿ ಹೊಸ ಬಾಳಿಗೆ ಕಾಲಿಟ್ಟರು. ಈ ಸಮಯದಲ್ಲಿ ನದಾಫ್ ಸಮಾಜದ ರಾಜ್ಯ ಮುಖಂಡ ಲಾಲಸಾಬ ನದಾಫ್, ಕುಷ್ಟಗಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ನಗರಸಭೆಯ ಅಧ್ಯಕ್ಷ ಲಕ್ಷ್ಮಣ ಗುರಂ, ಸದಸ್ಯರಾದ ಚಂದ್ರಶೇಖರ ಏಕಬೋಟೆ, ಅರ್ಬನ್ ಬ್ಯಾಂಕ್ ನಿರ್ದೇಶಕರಾದ ವಿಜಯ ಗಿರಡ್ಡಿ, ಪ್ರವೀಣ ಹೂಲಗೇರಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಸಾಕಾ ಸೇರಿದಂತೆ ಪ್ರಮುಖರ ದಂಡೇ ಅಲ್ಲಿ ಸೇರಿತ್ತು.