ನಲವತ್ತಲ್ಲಾ ನಾಲ್ಕ ಜನ ಶಾಸಕರನ್ನ ಕರಕೊಂಡ ಹೋಗ್ಲಿ

0
11

ಕುಷ್ಟಗಿ: ಬಿಜೆಪಿಯಲ್ಲಿ ಇರುವ ಎಲ್ಲರೂ ಅತೃಪ್ತರು, ನಮ್ಮ ಪಕ್ಷ 136 ಸೀಟು ಪಡೆದುಕೊಂಡು ಸರ್ಕಾರ ರಚನೆ ಮಾಡಿದೆ. ಬಿಜೆಪಿಯವರಿಗೆ ತಾಕತ್ತು, ಧಮ್ ಇದ್ದರೆ 40 ಅಲ್ಲ, 4 ಜನ ಶಾಸಕರನ್ನು ಕರೆದುಕೊಂಡು ಹೋಗಲಿ ಎಂದು ಜಿಲ್ಲಾ ಉಸ್ತವಾರಿ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದರು.
ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಅದು ಅಪವಿತ್ರ ಮೈತ್ರಿ. ಜ್ಯಾತ್ಯಾತೀತ ಜನತಾದಳ ಎಂದು ಇರುವುದನ್ನು ಕೋಮುವಾದಿ ಜನತಾದಳ ಎಂದು ಬದಲಾಯಿಸಲಿ ಜಾತ್ಯಾತೀತರು ಎಂದು ಇಟ್ಕೊಂಡು ಕೋಮುವಾದಿಗಳ ಜೊತೆ ಹೋಗುತ್ತಾರೆ ಎಂದು ಟೀಕಿಸಿದರು.
ಬಿ.ಕೆ. ಹರಿಪ್ರಸಾದ್ ಅವರು ಹಿರಿಯರಾಗಿದ್ದು, ಕಾಂಗ್ರೆಸ್ ಪಕ್ಷಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಅವರಿಗೆ ಏನೋ ನೋವಾಗಿರಬಹುದು ಆದ್ದರಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ ಅಸಮಾಧಾನ ಹೊರಹಾಕಿದ್ದಾರೆ. ತಪ್ಪು-ಸರಿ ಎನ್ನಲ್ಲ. ಆದರೆ, ಅವರು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕಿತ್ತು. ಬಿ.ಕೆ. ಹರಿಪ್ರಸಾದ ಅವರು ಸಿದ್ದರಾಮಯ್ಯ ಅವರ ಕುರಿತು ಮಾಧ್ಯಮದ ಮುಂದೆ ಬಹಿರಂಗವಾಗಿ ಮಾತನಾಡಬಾರದಿತ್ತು. ಈ ಕುರಿತು ನಮ್ಮ ರಾಷ್ಟ್ರೀಯ ಅಧ್ಯಕ್ಷರು ಮಾತನಾಡಿ, ಅವರ ಸಿಟ್ಟನ್ನು ಶಮನ ಮಾಡುವ ಕೆಲಸ ಮಾಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯನವರು ನಾನು ದೇವರಾಜ ಅರಸು ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ದೇವರಾಜು ಅರಸು ಜಾಗದಲ್ಲಿ ಸಿದ್ದರಾಮಯ್ಯ ಅವರನ್ನು ಕಾಣುತ್ತೇವೆ ಅಂತ ನಾನೇ ಹೇಳಿದ್ದು. ಸಿದ್ದರಾಮಯ್ಯ ಅವರು ನಾನು ಯಾವತ್ತು ದೇವರಾಜ ಅರಸು ಆಗಲ್ಲ ಎಂದು ಸ್ವತಃ ತಾವೇ ಹೇಳಿದ್ದಾರೆ. ದೇವರಾಜು ಅರಸು ಅವರು ನಡೆದು ಬಂದ ಹಾದಿಯಲ್ಲಿ ಸಿದ್ದರಾಮಯ್ಯ ನಡೆಯುತ್ತಿದ್ದಾರೆ ಎಂದರು.
ಎಸ್ಸಿ-ಎಸ್ಟಿ ಹಣ ಬೇರೆ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬ ಬಿಜೆಪಿಯವರ ಆರೋಪ ಸುಳ್ಳು. ಏಕೆಂದರೆ ಕಳೆದ ಬಿಜೆಪಿ ಸರ್ಕಾರದಲ್ಲಿ ಇದೇ ದುಡ್ಡನ್ನು ಸಹಿತ ಮೆಟ್ರೋ ಯೋಜನೆಗೆ ಬಳಸಲಾಗಿತ್ತು. ಆ ಸಮಯದಲ್ಲಿ ಗೋವಿಂದ ಕಾರಜೋಳ ಅವರು ಬಾಯಿಯಲ್ಲಿ ಬೊಟ್ಟು ಇಟ್ಟಕೊಂಡಿದ್ರಾ?, ಬಿಸ್ಕೀಟ್ ತಿನ್ನುತ್ತಿದ್ರಾ?. ಸರ್ಕಾರದ ಕುರಿತು ಮಾತಾಡೊ ಯೋಗ್ಯತೆ ಬಿಜೆಪಿಯ ಯಾರಿಗೂ ಇಲ್ಲ ಎಂದು ಟೀಕಿಸಿದರು.

Previous articleಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ
Next articleಕಾವೇರಿ ನೀರು: ತಮಿಳುನಾಡಿಗೆ 15 ದಿನ ನೀರು ಹರಿಸಲು ಸೂಚನೆ