ಗ್ಯಾರೆಂಟಿ ‌ಯೋಜನೆಗಳ ಜಾರಿಗೆ ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ, ದಲಿತರಿಗೆ ಅನ್ಯಾಯ

0
8
cm

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹಣಕಾಸು ಹೊಂದಿಸಲು ಎಸ್ಸಿ,ಎಸ್ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ದುರ್ಬಳಕೆ ಮಾಡಿ, ಎಸ್ಸಿ ಎಸ್ಟಿ ಸಮುದಾಯಕ್ಕೆ ದ್ರೋಹ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಬಿಜಿಪಿ ಸದಸ್ಯರನ್ನು ವಿಧಾನಸಭೆ ಕಲಾಪದಿಂದ ಹೊರಹಾಕಿರುವುದನ್ನು ಖಂಡಿಸಿ ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪಕ್ಷದ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇವರು ಮಂಡಿಸಿರುವುದು ಜನ ವಿರೋಧಿ ಬಜೆಟ್‌ ಇವರು ಗ್ಯಾರೆಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇವರ ಅವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿದ್ದಾರೆ. ನಿಜಲಿಂಗಪ್ಪರಿಂದ ಹಿಡಿದು ಜಗದೀಶ ಶೆಟ್ಟರ್‌ವರೆಗೆ ಒಂದು ಲಕ್ಷ ಕೋಟಿ ಸಾಲವಾಗಿತ್ತು‌. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಒಂದು ಲಕ್ಷ ಮೂವತ್ತು ಸಾವಿರ ಕೋಟಿ ಸಾಲ ಮಾಡಿದ್ದಾರೆ‌.

ದಲಿತರ ಕಲ್ಯಾಣಕ್ಕಾಗಿ‌ ಮೀಸಲಿಟ್ಟ ಎಸ್ಸಿಪಿ, ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ‌. ಗೃಹ ಲಕ್ಷ್ಮೀ ಯೋಜನೆಗೆ 6 ಸಾವಿರ ಕೋಟಿ ರೂ. ಎಸ್‌ಸಿಪಿ, ಟಿಎಸ್ಪಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಗ್ಯಾರೆಂಟಿಗಳಿಗೆ 13,000 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿರುವ ದಲಿತ ಶಾಸಕರು ಹಾಗೂ ಸಚಿವರು ಏನು ಮಾಡುತ್ತಿದ್ದಿರಿ. ಅದನ್ನು ಕೇಳಲು ಧೈರ್ಯ ಇಲ್ಲವೇ ನರ ಇಲ್ಲವೇ ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರ ಹೆಸರಿನಲ್ಲಿ ನಾವು 100 ಹಾಸ್ಟೇಲ್ ನಿರ್ಮಾಣ ಮಾಡಲು ಘೋಷಣೆ ಮಾಡಿದ್ದೇವು, ಹಿಂದುಳಿದ ವರ್ಗದ ಹಾಸ್ಟೆಲ್ ನಿರ್ಮಾಣ ಮಾಡಲು ಘೋಷಣೆ ಮಾಡಿದ್ದೇವು. ಅವುಗಳನ್ನು ನಿಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಲಿಲ್ಲ. ನೀವು ದಲಿತರ ವಿರೋಧಿಗಳು ಎಂದು ಆರೋಪಿಸಿದರು.

ಭ್ರಷ್ಟಾಚಾರದಲ್ಲಿ ನಂಬರ್ ಒನ್

ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ನಂಬರ್ ಒನ್ ಅಂತ ವರದಿ ಬಂದಿದೆ. ಗುಮಾಸ್ತನಿಂದ ಹಿಡಿದು ಸೆಕ್ರೆಟರಿವರೆಗೂ ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಿದ್ದೀರಿ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಐಎಫ್‌ಎಸ್ ಅಧಿಕಾರಿ ನೇಮಕ ಮಾಡಬೇಕು‌. ಅದರ ಬದಲು ಸಂಬಂಧಿಕ ಅಂತ ಗುತ್ತಿಗೆ ನೌಕರರನ್ನು ಸೆಕ್ರೆಟರಿಯಾಗಿ ನೇಮಕ ಮಾಡಿದ್ದಾರೆ.

ಗ್ಯಾರೆಂಟಿಗಳಲ್ಲಿ ಜನರಿಗೆ ಮೋಸ ಮಾಡಿದ್ದೀರಿ, ಕರೆಂಟ್ ದರ ಹೆಚ್ಚಳ ಮಾಡಿದ್ದೀರಿ, ಗೃಹಲಕ್ಷ್ಮೀಗೆ ಇನ್ನೂ ಯಜಮಾನಿಯನ್ನು ಹುಡುಕಾಟ ನಡೆಸಿದ್ದಾರೆ. ಯುವ ನಿಧಿ ಅಯೋಮಯವಾಗಿದೆ. ಎಂದು ವಾಗ್ದಾಳಿ ನಡೆಸಿದರು.

ನಾವು ಕೋವಿಡ್ ಸಂದರ್ಭದಲ್ಲಿ ನಾವು ಉತ್ತಮ ಆರ್ಥಿಕ ನಿರ್ವಹಣೆ ಮಾಡಿದ್ದಕ್ಕೆ ನೀವು ಇಷ್ಟು ಗಾತ್ರದ ಬಜೆಟ್ ಮಂಡಿಸಲು ಸಾಧ್ಯವಾಗಿದೆ. ನಮ್ಮ ಅವಧಿಯಲ್ಲಿ ಜಿಎಸ್‌ಟಿ, ಮೋಟರ್ ವೆಹಿಕಲ್ ತೆರಿಗೆ ಎಲ್ಲವೂ ಹೆಚ್ಚು ಸಂಗ್ರಹವಾಗಿದೆ.

ಕೋವಿಡ್ ಸಂದರ್ಭದಲ್ಲಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಅತಿ ಹೆಚ್ಚು ಹಣ ನೀಡಿದ್ದಾರೆ. ಕೇಂದ್ರ ಸರ್ಕಾರ ಕಳೆದ ವರ್ಷ 3500 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಯುಪಿಎ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಅವರು ಸೋನಿಯಾ ಗಾಂಧಿ ಮುಂದೆ ಹೋಗಿ ನಿಲ್ಲಲು ಆಗುತ್ತಿರಲಿಲ್ಲ. ಕೇಂದ್ರ ನೀಡಿದ ಹಣದ ಬಗ್ಗೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಸ್ತಾಪ ಮಾಡದೆ ಮರೆಮಾಚಿದ್ದಾರೆ ಎಂದು ಆರೋಪಿಸಿದರು.

ಇನ್ನು ಐಎಎಸ್ ಅಧಿಕಾರಿಗಳ ಸೇವಾ ನಿಯಮದ ಬಗ್ಗೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ ವಿವರವಾಗಿ ಪತ್ರದ ಮೂಲಕ ಹೇಳಿದ್ದಾರೆ. ಸ್ಪೀಕರ್ ಅತ್ಯಂತ ಸಣ್ಣ ವಯಸ್ಸಿನಲ್ಲಿ ಸ್ಪೀಕರ್ ಆಗಿದ್ದೀರಿ. ನೀವು ಕಾಂಗ್ರೆಸ್ ಭೋಜನ ಕೂಟಕ್ಕೆ ತೆರಳಿ ಅವರ ಬಾಗಿಲು ಕಾದಿರಿ,ಇದರಿಂದ ನಿಮಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಅವಮಾನವಾಗಿದೆ. ನಾವು ಸದನದಲ್ಲಿ ಪ್ರತಿಭಟನೆ ಮಾಡಿದರೆ ಕರೆದು ಚಹಾ ಕೊಡಬೇಕಿತ್ತಾ ಅಂತ ಕೇಳಿದ್ದೀರಿ, ನಾವು ನಿಮ್ಮ ಚಹಾ ಕುಡಿಯುಲು ಸದನಕ್ಕೆ ಬಂದಿಲ್ಲ. ನಾವು ಜನರ ಪರವಾಗಿ ಚರ್ಚೆ ಮಾಡಲು ಬರುತ್ತೇವೆ. ನಾವೇ ನಿಮಗೆ ಪ್ರತಿ ದಿನ ಟಿ ಕುಡಿಸುತ್ತೇವೆ‌‌ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಜನಪ್ರೀಯತೆ‌ ಕಳೆದುಕೊಂಡಿದೆ. ಐದು ಜನ ಟೆರೆರಿಸ್ಟ್ ಗಳು ಸಿಕ್ಕಿದ್ದಾರೆ ಅವರನ್ನು ಟೆರೆರಿಸ್ಟ್ ಎನ್ನಲು ಆಗುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ‌‌. ಸಾಮಾನ್ಯ ಅಪರಾಧ ಮಾಡುವವರು ಹ್ಯಾಂಡ್ ಗ್ರ್ಯಾನೈಡ್ ಇಟ್ಟುಕೊಳ್ಳುತ್ತಾರಾ? ಇದೆಲ್ಲದಕ್ಕೂ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದರು.

Previous articleಮೋದಿ ಉಪನಾಮ ಹೇಳಿಕೆ: ಆಗಸ್ಟ್‌ 4ರಂದು ವಿಚಾರಣೆ
Next articleಹಳೇ ಬಾಟಲಿಯಲ್ಲಿ ಅಕ್ರಮ ಮದ್ಯ: ಇಬ್ಬರ ಬಂಧನ