ಶ್ರೀರಂಗಪಟ್ಟಣ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿ ಅವರ ಅಸ್ಥಿಯನ್ನು ವಿಸರ್ಜನೆ ಮಾಡಲಾಯಿತು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಸ್ನಾನಘಟ್ಟ ಬಳಿಯ ಕಾವೇರಿ ನದಿಗೆ ವಿಜಯರಾಘವೇದ್ರ ಹಾಗೂ ಪುತ್ರ ಶೌರ್ಯ ಸೇರಿದಂತೆ ಕುಟುಂಬಸ್ಥರು ವಿಧಿ ವಿಧಾನಗಳನ್ನು ನೆರವೇರಿಸಿ ಅಸ್ಥಿ ವಿಸರ್ಜಿಸಿದರು.
ವೈದಿಕ ಆರ್ಚಕ ರಮೇಶ್ ಶರ್ಮ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು. ನಟ ವಿಜಯ್ ರಾಘವೇಂದ್ರ, ಬಿ.ಕೆ. ಶಿವರಾಂ, ಚೆನ್ನೇಗೌಡ, ನಟ ಮುರಳಿ ಸೇರಿದಂತೆ ಕುಟುಂಬಸ್ಥರು ವಿಧಿವಿಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಇದೇ ವೇಳೆ ದೋಷ ಪರಿಹಾರಕ್ಕಾಗಿ ಧನಿಷ್ಟ ಪಂಚಕ ನಕ್ಷತ್ರ ಹೋಮ ನಡೆಸಿದ್ದಾಗಿ ಅರ್ಚಕ ರಮೇಶ್ ಶರ್ಮಾ ಹೇಳಿದರು.
ಉತ್ತರಭಾದ್ರ ನಕ್ಷತ್ರದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ದೋಷ ಪರಿಹಾರಕ್ಕಾಗಿ ಧನಿಷ್ಟ ಪಂಚಕ ನಕ್ಷತ್ರ ಹೋಮ ನಡೆಸಿ, ಬೊಂಬೆಗೆ ಪ್ರೇತಾ ಆವಾಹನೆ ಮಾಡಿಕೊಂಡು ಬಲಿ ಪ್ರಧಾನ ನೆರವೇರಿಸಿ ಬಳಿಕ ಅಸ್ಥಿಗೆ ಅಭಿಷೇಕ, ಷೋಡಶ ಪೂಜೆ ಮಾಡಿ ಅಸ್ಥಿ ವಿಸರ್ಜನೆ ಮಾಡಿಸಲಾಯಿತು.
ಸ್ಪಂದನಾ ಅವರು ಮನೆಯಲ್ಲಿಯೇ ಮೃತರಾಗಿದ್ದರೆ, ಮನೆಯಲ್ಲಿ ಗೂಡು ಹಾಕಿ ಮನೆ ಬಿಡಬೇಕಿತ್ತು. ಮನೆಯಿಂದ ಹೊರಗಡೆ ಮೃತರಾದ ಹಿನ್ನೆಲೆಯಲ್ಲಿ ನಕ್ಷತ್ರ ಹೋಮ ನಡೆಸಿ ಅಸ್ಥಿ ವಿಸರ್ಜನೆ ಮಾಡಿದ್ದಾಗಿ ಅರ್ಚಕರು ತಿಳಿಸಿದರು.