ಹುಬ್ಬಳ್ಳಿ : ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ನಾನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆ ಎಲ್ಲವೂ ನಿಜವಾಗುವುದಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ 80, ಕಾಂಗ್ರೆಸ್ ಗೆ 107 ಸ್ಥಾನ ಬರಲಿವೆ ಎಂದು ‘ಎಕ್ಸಿಟ್ ಪೋಲ್’ ನಲ್ಲಿ ಹೇಳಲಾಗಿತ್ತು. ಅದರೆ, ಅದು ಉಲ್ಟಾ ಆಯಿತು. ಬಿಜೆಪಿಗೆ 104 ಸ್ಥಾನ, ಕಾಂಗ್ರೆಸ್ ಗೆ 80 ಬಂದವು. ಹೀಗಾಗಿ, ಎಕ್ಸಿಟ್ ಪೋಲ್ ಎಕ್ಸಿಟ್ ಪೋಲ್ ಅಷ್ಟೇ. ನಮಗೆ ವಿಶ್ವಾಸವಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದರು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯವ್ಯಾಪಿ ಪ್ರಚಾರ ನಡೆಸಿದ್ದು, ಪಕ್ಷಕ್ಕೆ ಹೆಚ್ಚಿನ ಸ್ಥಾನ ತಂದು ಕೊಡಲಿದೆ. ವಿಶೇಷವಾಗಿ ಮಹಿಳೆಯರು, ಯುವಕರು ಬಿಜೆಪಿಗೆ ಅಧಿಕ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ ಎಂದು ಹೇಳಿದರು.